ಸಿನಿವಾಣಿ

ವಂಚನೆ ಆರೋಪ: ಇಬ್ಬರು ಉದ್ಯಮಿಗಳ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ ನಟಿ ಸ್ನೇಹಾ!

ಚೆನ್ನೈ: ಇಬ್ಬರು ಉದ್ಯಮಿಗಳಿಂದ ಬಹುಭಾಷಾ ನಟಿ ಸ್ನೇಹಾ ಅವರಿಗೆ ಹಣ ವಂಚನೆ ಆಗಿದ್ದು, ನ್ಯಾಯಕ್ಕಾಗಿ ಪೊಲೀಸ್​ ಠಾಣೆಯ​ ಮೆಟ್ಟಿಲೇರಿದ್ದಾರೆ.

ವಿವರಣೆಗೆ ಬರುವುದಾದರೆ, ಉದ್ಯಮಿಗಳ ಹೆಸರು ಇನ್ನು ತಿಳಿದುಬಂದಿಲ್ಲ. ಆದರೆ, ಅವರು ರಫ್ತು ಕಂಪನಿ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಕಂಪನಿಯಲ್ಲಿ ಬಂಡವಾಳ ಹೂಡಿದರೆ ಒಳ್ಳೆಯ ಲಾಭ ಬರುತ್ತದೆ ಎಂದು ನಟಿ ಸ್ನೇಹಾ ಅವರ ಮನವೊಲಿಸಿ ಹಣ ಪಡೆದಿದ್ದಾರೆ.

ಉದ್ಯಮಿಗಳ ಮಾತು ನಂಬಿ ನಟಿ ಸ್ನೇಹಾ ಅವರು ಬರೋಬ್ಬರಿ 26 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ್ದಾರೆ. ಆದರೆ, ನಂತರದ ದಿನಗಳಲ್ಲಿ ಉದ್ಯಮಿಗಳಿಂದ ನಟಿ ಸ್ನೇಹಾ ಅವರಿಗೆ ಯಾವುದೇ ಹಣ ದೊರೆಯಲಿಲ್ಲ. ಅವರನ್ನು ಸಂಪರ್ಕಿಸಿದಾಗ ಹಣ ಕೊಡಲು ನಿರಾಕರಿಸಿದ ಉದ್ಯಮಿಗಳು ಸ್ನೇಹಾ ಅವರಿಗೆ ಬೆದರಿಕೆ ಹಾಕಿರುವ ಆರೋಪ ಮಾಡಿದ್ದಾರೆ. ಬೆದರಿಕೆಯಿಂದ ಹೆದರಿದ ಸ್ನೇಹಾ, ಉದ್ಯಮಿಗಳ ವಿರುದ್ಧ ಚೆನ್ನೈನ ಕಣಥೋರ್​ ಪೊಲೀಸ್ ಠಾಣೆಯಲ್ಲಿ​ ದೂರು ದಾಖಲಿಸಿದ್ದು, ತನಿಖೆ ಆರಂಭವಾಗಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಸ್ನೇಹಾ ಕೊನೆಯದಾಗಿ ತೆಲುಗಿನ ರಾಮ್ ಚರಣ್ ಅಭಿನಯದ 'ವಿನಯ ವಿಧೇಯ ರಾಮ'ದಲ್ಲಿ ಕಾಣಿಸಿಕೊಂಡರು. ಪ್ರಸ್ತುತ ಅವರು 'ಶಾಟ್ ಬೂಟ್ 3' ಎಂಬ ತಮಿಳು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್​)