ಸಿನಿವಾಣಿ

ದೇಶಾದ್ಯಂತ ತೆರೆಗೆ ಅಪ್ಪಳಿಸಿದ ತೂಫಾನ್​: ಬೆಳ್ಳಿಪರದೆಯಲ್ಲಿ ರಾಕಿ ಭಾಯ್​ ಅಬ್ಬರ​, ಅಭಿಮಾನಿಗಳ ಹರ್ಷೋದ್ಘಾರ

ಬೆಂಗಳೂರು​: ಕಳೆದ ಮೂರು ವರ್ಷಗಳಿಂದ ಜಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಬಹುನಿರೀಕ್ಷಿತ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಇಂದು ನಸುಕಿನ ಜಾವದಿಂದಲೇ ದೇಶಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಿದೆ. ರಾಜ್ಯಾದ್ಯಂತ ಸಂಭ್ರಮ ಮನೆ ಮಾಡಿದ್ದು, ಯಶ್​ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿದೆ.

ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ನಸುಕಿನ ಜಾವವೇ ಶೋಗಳು ಆರಂಭವಾಗಿದ್ದು, ರಾಕಿ ಭಾಯ್​ ಅದ್ಧೂರಿ ಎಂಟ್ರಿಯನ್ನು ಕಣ್ತುಂಬಿಕೊಂಡಿದ್ದಾರೆ. ಬೀದರ್​ನಿಂದ ಹಿಡಿದು ಗಡಿ ಜಿಲ್ಲಿ ಚಾಮರಾಜನಗರದವರೆಗೆ ಕೆಜಿಎಫ್​ ಹವಾ ಭಾರೀ ಜೋರಾಗಿದ್ದು, ನಟ ಯಶ್​ಗೆ ಜೈಕಾರ ಮೊಳಗಿದೆ. ಚಿತ್ರಮಂದಿರಗಳ ಮುಂದೆ ಪಟಾಕಿ, ಮದ್ದುಗುಂಡುಗಳ ಶಬ್ಧ ಜೋರಾಗಿದೆ.

ಈಗಾಗಲೇ ಚಿತ್ರವನ್ನು ವೀಕ್ಷಣೆ ಮಾಡಿರುವ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಈ ಚಿತ್ರ ಕನ್ನಡ ಚಿತ್ರರಂಗದ ಎಲ್ಲ ದಾಖಲೆಗಳನ್ನು ಮುರಿಯುವುದರಲ್ಲಿ ಯಾವುದೇ ಸಂಶಯವೇ ಇಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಯಶ್​ ಅವರ ಅಭಿನಯಕ್ಕೆ ಮತ್ತು ಡೈಲಾಗ್​ ಡಿಲಿವರಿಗೆ ಮನಸೋತಿದ್ದಾರೆ.

ಬೆಳ್ಳಿ ತೆರೆಯ ಮೇಲೆ ನೆಚ್ಚಿನ ನಟನನ್ನು ನೋಡಿದ ಕೂಡಲೇ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಈಗಾಗಲೇ ಬಹುತೇಕ ಕಡೆ ಒಂದು ಶೋ ಮುಕ್ತಾಯವಾಗಿದ್ದು, ಮೂರು ವರ್ಷಗಳ ದೀರ್ಘ ಕುತೂಹಲಕ್ಕೆ ತೆರೆಬಿದ್ದಿದೆ. ವಾರಾಂತ್ಯದ ಜತೆ ರಜೆ ಇರುವುದರಿಂದ ಬಾಕ್ಸ್ ಆಫೀಸ್​ನಲ್ಲಿ ಕೆಜಿಎಫ್​ 2 ಚಿತ್ರ ಕಮಾಲ್​ ಮಾಡುವ ಎಲ್ಲ ಸಾಧ್ಯತೆಗಳು ಇವೆ.