

ಹೈದರಾಬಾದ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಸಿನಿಮಾ ನಾಳೆ ದೇಶಾದ್ಯಂತ ಬಿಡುಗಡೆಯಾಗಲಿದ್ದು, ಚಿತ್ರತಂಡ ಕೊನೆಯ ಹಂತದವರೆಗೂ ಪ್ರಚಾರದಲ್ಲಿ ಬಿಜಿಯಾಗಿದೆ. ಇದರ ನಡುವೆ ತೆಲುಗು ಮಾಧ್ಯಮಗಳು ರಾಕಿಭಾಯ್ ವಿರುದ್ಧ ಸೇಡು ತೀರಿಸಿಕೊಂಡಿವೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.
ತೆಲುಗು ಮಾಧ್ಯಮಗಳಿಗೆ ರಾಕಿಭಾಯ್ ಏನು ಮಾಡಿದರು? ಯಾಕೆ ಸೇಡು ತೀರಿಸಿಕೊಂಡರು? ಯಶ್ ಮಾಡಿದ ತಪ್ಪಾದರೂ ಏನು? ಎಂಬುದನ್ನು ತಿಳಿಯುವ ಮುನ್ನ ಒಂದು ಸಣ್ಣ ಫ್ಲ್ಯಾಶ್ ಬ್ಯಾಕ್ ಓದಿ ಬಿಡಿ.
ನಟ ಅಲ್ಲು ಅರ್ಜುನ್ ನಟನೆಯ ಪುಷ್ಪ ದಿ ರೈಸ್ ಸಿನಿಮಾ ಕಳೆದ ವರ್ಷ ಡಿಸೆಂಬರ್ನಲ್ಲಿ ತೆರೆಕಂಡಿತು. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಚಿತ್ರತಂಡ ಎಲ್ಲ ಭಾಷೆಗಳಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿತ್ತು. ಹೀಗೆ ಕರ್ನಾಟಕದಲ್ಲೂ ಪತ್ರಿಕಾಗೋಷ್ಠಿ ನಡೆಯಿತು. 11.30ಕ್ಕೆ ನಿಗದಿಯಾಗಿದ್ದ ಪತ್ರಿಕಾಗೋಷ್ಠಿಗೆ ಎರಡು ಗಂಟೆ ತಡವಾಗಿ 1.30ಕ್ಕೆ ಆಗಮಿಸಿದ್ದರು. ತಡವಾಗಿ ಬಂದಿದ್ದಕ್ಕೆ ಅಲ್ಲು ಅರ್ಜುನ್ ವಿರುದ್ಧ ಕನ್ನಡದ ಮಾಧ್ಯಮಗಳು ಗರಂ ಆಗಿ ಆಕ್ರೋಶ ಹೊರಹಾಕಿದ್ದರು. ಆಕ್ರೋಶಕ್ಕೆ ಮಣಿದಿದ್ದ ಅಲ್ಲು ಅರ್ಜುನ್ ಕೊನೆ ಕ್ಷಮೆ ಕೇಳಿದ್ದರು.
ಇದೀಗ ಇದೇ ಅನುಭವನ್ನು ಯಶ್ ಅನುಭವಿಸಿದ್ದಾರೆ. ವಿಶಾಖಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆಜಿಎಫ್ 2 ಚಿತ್ರತಂಡ ಪತ್ರಿಕಾಗೋಷ್ಠಿಗೆ ಯಶ್ ಒಂದು ಗಂಟೆ ತಡವಾಗಿ ಹೋಗಿದ್ದಕ್ಕೆ ಅಲ್ಲಿನ ಮಾಧ್ಯಮಗಳು ಯಶ್ ವಿರುದ್ಧ ಅಸಮಾಧಾನ ಹೊರಹಾಕಿದವು. ಬಳಿಕ ಯಶ್ ಕ್ಷಮೆಯಾಚಿಸುವ ಮೂಲಕ ಆಕ್ರೋಶವನ್ನು ತಣ್ಣಗಾಗಿಸಿದರು.
ಹೀಗಾಗಿ ಇದನ್ನು ರಿವೇಂಜ್ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಲಾಗುತ್ತಿದೆ. ಸಾಮಾನ್ಯವಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಾಗ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಹೀರೋ ಅಥವಾ ಹೀರೋಯಿನ್ ತಡವಾಗಿ ಆಗಮನವಾಗುವುದು ಸಾಮಾನ್ಯ. ಆದರೆ, ಇದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಗೆ ಆಹಾರವಾಗಿರುವುದು ವಿಪರ್ಯಾಸ. (ಏಜೆನ್ಸೀಸ್)