ನಾನಂದು ಸೈಕಲ್​ ಏರಿ ಬರಲು ಕಾರಣ... 2021ರ ಬಹುಚರ್ಚಿತ ಘಟನೆಯ ಬಗ್ಗೆ ವಿಜಯ್ ಹೇಳಿದ್ದಿಷ್ಟು​

Beast
Published on

ಚೆನ್ನೈ: ಇಳಯದಳಪತಿ ವಿಜಯ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಬೀಸ್ಟ್​ ಇಂದು ದೇಶಾದ್ಯಂತ ತೆರೆಕಂಡಿದ್ದು, ಎಲ್ಲೆಡೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಚಿತ್ರದ ಪ್ರಚಾರ ಭಾಗವಾಗಿ ವಿಜಯ್​ ಅವರು ಮಾಧ್ಯಮ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಅಚ್ಚರಿಯೆಂದರೆ, 10 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವಿಜಯ್​ ಮಾಧ್ಯಮ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಬೀಸ್ಟ್​ ಸಿನಿಮಾ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ವಿಜಯ್​ ಅವರನ್ನು ಸಂದರ್ಶನ ಮಾಡಿದ್ದರು. ಇದು ಸನ್​ ಟಿವಿಯಲ್ಲಿ ಪ್ರಸಾರವಾಗಿತ್ತು.

ಸಂದರ್ಶನದಲ್ಲಿ ವಿಜಯ್​ ಕೆಲವೊಂದು ಅನಿರೀಕ್ಷಿತ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ. 2021ರಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್​ ಸೈಕಲ್​ ಏರಿ ಬಂದು ಮತ ಚಲಾವಣೆ ಮಾಡಿದ್ದರು. ಈ ವೇಳೆ ಇದು ಭಾರಿ ಸುದ್ದಿಯಾಗಿತ್ತು. ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ ಸೈಕಲ್​ನಲ್ಲಿ ಬಂದು ಮತ ಚಲಾಯಿಸುವ ಮೂಲಕ ಬಿಜೆಪಿಗೆ ಟಕ್ಕರ್​ ಕೊಟ್ಟಿದ್ದಾರೆ ಎಂದು ಎಲ್ಲ ಮಾಧ್ಯಮಗಳು ಸುದ್ದಿ ಮಾಡಿದ್ದವು.

ಈ ಘಟನೆಯನ್ನು ಸಂದರ್ಶನದಲ್ಲಿ ವಿಜಯ್​ ಮೆಲಕು ಹಾಕಿದರು. ಮತಗಟ್ಟೆಯು ನನ್ನ ಮನೆಗೆ ತುಂಬಾ ಹತ್ತಿರವಾಗಿತ್ತು. ಮತ ಚಲಾಯಿಸಲು ಎಂದು ಮನೆಯಿಂದ ನಾನು ಆಚೆ ಬಂದಾಗ ನನ್ನ ಮಗ ಆತನ ಬೈಸಿಕಲ್​ ತೆಗೆದುಕೊಂಡು ಹೋಗುವಂತೆ ಹೇಳಿದ. ಅಲ್ಲದೆ, ಮತಗಟ್ಟೆಯಲ್ಲಿ ಕಾರು ಪಾರ್ಕ್​ ಮಾಡುವುದು ಹೇಗೆ ಎಂಬ ಅಚ್ಚರಿಯು ಆಯಿತು. ಹೀಗಾಗಿ ಬೈಸಿಕಲ್​ ತೆಗೆದುಕೊಂಡು ಹೋದೆ ಎಂದು ಹೇಳಿದರು.

ಮತ್ತಷ್ಟು ಮಾತು ಮುಂದುವರಿಸಿದ ವಿಜಯ್​, ನಾನು ನನ್ನ ಐಡಿಯಾದೊಂದಿಗೆ ಮನೆಯಿಂದ ಹೊರಟೆ. ಆವಾಗಲೇ ನನಗೆ ಗೊತ್ತಾಗಿದ್ದು, ನನ್ನನ್ನು ಸಾಕಷ್ಟು ಜನರು ಹಿಂಬಾಲಿಸುತ್ತಿದ್ದಾರೆ ಎಂಬುದು. ಅಲ್ಲದೆ, ಅನೇಕ ಚಾನೆಲ್​ಗಳು ಕೂಡ ಲೈವ್​ ಮಾಡಿದವು. ಇಂದು ದೊಡ್ಡ ಪ್ರತಿಕ್ರಿಯೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ನೇರಪ್ರಸಾರವನ್ನು ನೋಡಿ ನನ್ನ ಮಗ ನನಗೆ ಕರೆ ಮಾಡಿ ಸೈಕಲ್​ ಚೆನ್ನಾಗಿದೆಯಾ? ಎಂದು ಕೇಳಿದ. ನಾನು ಅದನ್ನು ಕೇಳಿ ತುಸು ನಕ್ಕಿದೆ ಎಂದು ಹೇಳಿದರು.

ಹಲವು ವರ್ಷಗಳ ವರೆಗೆ ಮಾಧ್ಯಮದ ಮುಂದೆ ಹಾಜರಾಗದಿರಲು ಕಾರಣವನ್ನು ತಿಳಿಸಿದ ವಿಜಯ್, ಒಮ್ಮೆ ತನ್ನನ್ನು ಪತ್ರಿಕೆಯೊಂದು ತಪ್ಪಾಗಿ ಉಲ್ಲೇಖಿಸಿತು. ಹೀಗಾಗಿ ನಾನು ಮಾಧ್ಯಮಗಳಿಂದ ದೂರವಿದ್ದ ಎಂದು ಸ್ಪಷ್ಟನೆ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net