ಸಂತೋಷ್​ ಪಾಟೀಲ್​ ಸಾವು ಪ್ರಕರಣ: ಸಚಿವ ಈಶ್ವರಪ್ಪ ವಿರುದ್ಧ ಎಫ್​ಐಆರ್​ ದಾಖಲು, ದೂರಿನಲ್ಲಿ ಏನಿದೆ?

Santhosh Death Case
Published on

ಉಡುಪಿ: ಗುತ್ತಿಗೆದಾರ ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಉಡುಪಿ ಪೊಲೀಸ್​ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕಲಂ 306ರ ಅಡಿಯಲ್ಲಿ ಈಶ್ವರಪ್ಪ ಮತ್ತು ಅವರ ಆಪ್ತ ಸಹಾಯಕರಾದ ಬಸವರಾಜ್, ರಮೇಶ್ ಮತ್ತಿತರರ ಮೇಲೆ ಪ್ರಕರಣ ದಾಖಲಾಗಿದೆ. ತಡರಾತ್ರಿ 2.20ರ ಸುಮಾರಿಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಸಂತೋಷ್ ಪಾಟೀಲ್ ಅವರ ಸಹೋದರ ಪ್ರಶಾಂತ ಪಾಟೀಲ್ ದೂರು ಸಲ್ಲಿಸಿದ್ದಾರೆ.

ದೂರಿನಲ್ಲಿ ಆತ್ಮಹತ್ಯೆಗೆ ಕಾರಣ ತಿಳಿಸಿರುವ ಪ್ರಶಾಂತ ಪಾಟೀಲ್, ಸಹೋದರ ಸಂತೋಷ್​ ಪಾಟೀಲ್​ ಹಿಂಡಲಗಾ ಪಂಚಾಯತ್ ವ್ಯಾಪ್ತಿಯ ಲಕ್ಷ್ಮೀದೇವಿ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದ ಅಭಿವೃದ್ಧಿ ಕೆಲಸ ಮಾಡಿದ್ದ. 4 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಚರಂಡಿ ಫೇವರ್ಸ್ ಜೋಡಣೆ ಕಾಮಗಾರಿ ಮಾಡಿಸಿದ್ದ. ಈ ಹಣವನ್ನು ಬಿಡುಗಡೆ ಮಾಡಲು ಸಚಿವ ಈಶ್ವರಪ್ಪ ಶೇ. 40 ಕಮಿಷನ್​ಗೆ ಬೇಡಿಕೆ ಇಟ್ಟಿದ್ದರು ಎಂದು ದೂರಿಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೆ, ಕಮಿಷನ್​ ಬಗ್ಗೆ ಪತ್ನಿ ಜಯಾ ಮತ್ತು ನನ್ನ ಬಳಿ ತಿಳಿಸಿದ್ದ. ಅಲ್ಲದೆ, ಈ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ತನ್ನ ಜೀವಕ್ಕೇನಾದರೂ ಅಪಾಯವಾದರೆ ನೀವೇ ಕಾರಣ ಎಂದು ಈಶ್ವರಪ್ಪ ವಿರುದ್ಧ ಸಂತೋಷ್​ ಹೇಳಿದ್ದ. ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೂ ಮನವಿ ನೀಡಿದ್ದ. ಆದರೆ, ಯಾವುದಕ್ಕೂ ಸ್ಪಂದನೆ ಸಿಗದೆ ಮತ್ತು ಹಣ ಬಿಡುಗಡೆಯಾಗದೇ ಮನನೊಂದಿದ್ದ ಸಂತೋಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣರಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಪ್ರಶಾಂತ್​ ಪಾಟೀಲ್​ ದೂರಿನಲ್ಲಿ ತಿಳಿಸಿದ್ದಾರೆ.

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ A1 ಆರೋಪಿಯಾಗಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

ಆಗಿದ್ದೇನು?

ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ 40% ಕಮಿಷನ್​ ಆರೋಪ ಮಾಡಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ್ ಡೆತ್​ನೋಟ್​ ಬರೆದಿಟ್ಟು ನಿನ್ನೆ (ಏ.12) ಉಡುಪಿಯ ಲಾಡ್ಜ್​ವೊಂದರಲ್ಲಿ ಆತ್ಮಹತ್ಮೆಗೆ ಶರಣಾಗಿದ್ದಾರೆ. ಈ ಘಟನೆ ರಾಜ್ಯ ರಾಜಕಾರಣದಲ್ಲಿ ಬಿಡುಗಾಳಿ ಎಬ್ಬಿಸಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net