ಹೈದರಾಬಾದ್: ತಾರಾದಂಪತಿ ನಾಗಚೈತನ್ಯ-ಸಮಂತಾ ಡಿವೋರ್ಸ್ ಪಡೆದಾಗಿನಿಂದ ಇಬ್ಬರ ಕುರಿತ ಅನೇಕ ಸಂಗತಿಗಳು ಬೆಳಕಿಗೆ ಬರುತ್ತಿದೆ. ಸಮಂತಾ ಅವರು ನಾಗಚೈತನ್ಯಗೂ ಮುಂಚೆ ನಟ ಸಿದ್ಧಾರ್ಥ್ ಜತೆ ಡೇಟಿಂಗ್ ನಡೆಸಿ, ಮದುವೆಯಾಗಲು ಬಯಸಿದ್ದರು ಎಂಬ ಸುದ್ದಿ ಹರಿದಾಡಿತ್ತು. ಇದೀಗ ನಟ ನಾಗಚೈತನ್ಯ ಕುರಿತ ಇಂಟೆರೆಸ್ಟಿಂಗ್ ವಿಚಾರವೊಂದು ಸುದ್ದಿಯಾಗಿದೆ.
ಸಮಂತಾಗೂ ಮುನ್ನ ನಾಗಚೈತನ್ಯ ಅವರು ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಜತೆ ಡೇಟಿಂಗ್ ನಡೆಸಿದ್ದರಂತೆ. 2013ರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಬಳಿಕ ಇಬ್ಬರ ನಡುವೆ ಪ್ರೀತಿ ಚಿಗುರಿ, ತುಂಬಾ ಸಲುಗೆ ಬೆಳೆದಿತ್ತು. ನಂತರ ಇಬ್ಬರು ಡೇಟಿಂಗ್ ಕೂಡ ಮಾಡಿದ್ದರು. ಒಂದು ಹಂತದಲ್ಲಿ ತುಂಬಾ ಅಚ್ಚಿಕೊಂಡಿದ್ದ ಇಬ್ಬರು ಒಟ್ಟಿಗೆ ಒಂದು ಕ್ಷಣ ಕಳೆಯದೇ ಒಂದು ದಿನವೂ ಇರುತ್ತಿರಲಿಲ್ಲವಂತೆ. ಅಲ್ಲದೆ, ಇಬ್ಬರು ಮದುವೆ ಆಗುವ ನಿರ್ಧಾರಕ್ಕೂ ಬಂದಿದ್ದರು ಎಂದು ಹೇಳಲಾಗಿದೆ. ಆದರೆ, ಇಬ್ಬರ ನಡುವೆ ಏನಾಯಿತೋ ಏನೋ ದಿನ ಕಳೆದ ನಂತರ ಇಬ್ಬರು ದೂರವಾದರು ಎಂಬ ಸುದ್ದಿ ಟಾಲಿವುಡ್ ಗಲ್ಲಿಯಲ್ಲಿ ಹರಿದಾಡುತ್ತಿದೆ.
ಶ್ರುತಿ ಜತೆಗಿನ ಬ್ರೇಕಪ್ ಬಳಿಕ ನಾಗಚೈತನ್ಯ, ಸಮಂತಾರನ್ನು ಪ್ರೀತಿಸಿ ಮದುವೆ ಆದರು. 4 ವರ್ಷಗಳ ದಾಂಪತ್ಯ ಜೀವನ ನಡೆಸಿದ ಇಬ್ಬರು ವೈಯಕ್ತಿಕ ಕಾರಣಗಳಿಂದ ಕಳೆದ ಅಕ್ಟೋಬರ್ 2ರಂದು ಡಿವೋರ್ಸ್ ಘೋಷಣೆ ಮಾಡಿ, ಇದೀಗ ಸಂಪೂರ್ಣ ಸಿನಿಮಾ ಕಡೆ ತಮ್ಮ ಚಿತ್ತ ನೆಟ್ಟಿದ್ದಾರೆ.
ಇನ್ನು ನಾಗಚೈತನ್ಯರ ಸಿನಿಮಾ ವಿಚಾರಕ್ಕೆ ಬರುವುದಾದರೆ, ಆಮೀರ್ ಖಾನ್ ಮತ್ತು ಕರೀನಾ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಲಾಲ್ ಸಿಂಗ್ ಛಡ್ಡ ಸಿನಿಮಾದಲ್ಲಿ ನಾಗಚೈತನ್ಯ ನಟಿಸುವ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದಾರೆ. ಅಲ್ಲದೆ, ಬಂಗಾರರಾಜು ಸಿನಿಮಾ ಕಂಪ್ಲೀಟ್ ಆಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ. (ಏಜೆನ್ಸೀಸ್)