ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದಾದ ಬಿಗ್ಬಾಸ್ ಮತ್ತೆ ಕಿರುತೆರೆಗೆ ಅಪ್ಪಳಿಸಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಬಿಗ್ಬಾಸ್ ಸೀಸನ್ 8 ಕಳೆದ ಆಗಸ್ಟ್ನಲ್ಲಿ ಮುಕ್ತಾಯಗೊಂಡಿತ್ತು. ಇದೀಗ ಸೀಸನ್ 9ರ ತಯಾರಿ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದೆ.
ಸೀಸನ್ 8 ಕಲರ್ಸ್ ಕನ್ನಡದ ಎಲ್ಲ ಟಿಆರ್ಪಿ ದಾಖಲೆಗಳನ್ನು ಮುರಿದಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಕರೊನಾದಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ಸೀಸನ್ 8 ಅನ್ನು ಮತ್ತೆ ಆರಂಭಿಸುವ ಮೂಲಕ ರಿಯಾಲಿಟಿ ಶೋ ಇತಿಹಾಸಲ್ಲಿ ಹೊಸ ದಾಖಲೆಯನ್ನು ಸಹ ಬಿಗ್ಬಾಸ್ ಬರೆಯಿತು. ಇದೀಗ 9ನೇ ಸೀಸನ್ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಯಾವಾಗ ಶೋ ಆರಂಭವಾಗಲಿದೆ? ಮತ್ತು ಈ ಬಾರಿ ಯಾರು ಯಾರು ಶೋನಲ್ಲಿ ಸ್ಪರ್ಧಿಸಲಿದ್ದಾರೆ? ಎಂಬ ಕುತೂಹಲ ಮನೆ ಮಾಡಿದೆ.
ಇದೀಗ ಕೇಳಿಬಂದಿರುವ ಸುದ್ದಿಯ ಪ್ರಕಾರ ಬಿಬಿಕೆ 9ನೇ ಆವೃತ್ತಿಯು ಫೆಬ್ರವರಿಯ ಕೊನೆಯ ವಾರದಲ್ಲಿ ಟೆಲಿಕಾಸ್ಟ್ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಇನ್ನು ಅಧಿಕೃತವಾಗಿ ಘೋಷಣೆಯಾಗಿಲ್ಲ. ಬಹುಶಃ ಮುಂದಿನ ಕೆಲವೇ ದಿನಗಳಲ್ಲಿ ಘೋಷಣೆ ಆಗಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಗ್ಬಾಸ್ ಶೋ ತಯಾರಕರು ಕಿರುತೆರೆಯ ಟಾಪ್ ಸೆಲೆಬ್ರಿಟಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಸಂಪರ್ಕಿಸುತ್ತಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ಜನವರಿಯಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ ಎಂಬ ವದಂತಿ ಇತ್ತು. ಆದರೆ, ಶೋ ತಯಾರಕರು ತಮ್ಮ ಮನಸ್ಸನ್ನು ಬದಲಾಯಿಸಿದ್ದಾರೆಂದು ತೋರುತ್ತದೆ. ಸದ್ಯಸ ಮಾಹಿತಿಯ ಪ್ರಕಾರ ಬಿಗ್ಬಾಸ್ ಶೋ ತಯಾರಕರು ಸೀಸನ್ 9ಕ್ಕಾಗಿ ಬಿಗ್ಬಾಸ್ ಮನೆಯ ನೋಟವನ್ನು ಬದಲಾಯಿಸುವಲ್ಲಿ ನಿರತರಾಗಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)