ಸಿನಿವಾಣಿ

ಪುನೀತ್​ ಬಿಡುಗಡೆ ಮಾಡಲಿದ್ದಾರೆ ಧನಂಜಯ್​ ಹೊಸ ಚಿತ್ರದ ಟೈಟಲ್​ ...

ಬೆಂಗಳೂರಿನ ಮಾಜಿ ಡಾನ್​ ಎಂ.ಪಿ. ಜಯರಾಜ್​ ಅವರ ಕುರಿತಾದ ಚಿತ್ರದಲ್ಲಿ ನಟಿಸುವುದಾಗಿ ಧನಂಜಯ್​ ಫೆಬ್ರವರಿಯಲ್ಲೇ ಹೇಳಿಕೊಂಡಿದ್ದರು. ಈ ಕುರಿತು ಒಂದು ಪತ್ರಿಕಾಗೋಷ್ಠಿ ಸಹ ಆಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಜುಲೈನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು.

ಆದರೆ, ಲಾಕ್​ಡೌನ್​ನಿಂದ ಚಿತ್ರ ಪ್ರಾರಂಭವಾಗಲಿಲ್ಲ. ಒಂದು ಕಡೆ ಜಯರಾಜ್​ ಪಾತ್ರಕ್ಕೆ, ಧನಂಜಯ್​ ತಮ್ಮ ದೇಹವನ್ನು ಹುರಿಗೊಳಿಸುತ್ತಿದ್ದರೆ, ಇನ್ನೊಂದು ಕಡೆ ಚಿತ್ರತಂಡವು ಕಥೆ-ಚಿತ್ರಕಥೆ ಕೆಲಸಗಳಲ್ಲಿ ತೊಡಗಿಸಿಕೊಂಡಿತ್ತು.

ಈಗ ಚಿತ್ರದ ಪ್ರೀ-ಪ್ರೊಡಕ್ಷನ್​ ಕೆಲಸಗಳೆಲ್ಲವೂ ಒಂದು ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಈ ಮಧ್ಯೆ, ಚಿತ್ರಕ್ಕೆ ಹೆಸರಿಟ್ಟಿರಲಿಲ್ಲ. ಈಗ ಚಿತ್ರದ ಹೆಸರನ್ನು ಆಗಸ್ಟ್​ 15ರಂದು, 'ಪವರ್​ ಸ್ಟಾರ್​' ಪುನೀತ್​ ರಾಜಕುಮಾರ್​ ಅನಾವರಣಗೊಳಿಸಲಿದ್ದಾರೆ ಎಂದು ಧನಂಜಯ್​ ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಧನಂಜಯ್​, 'ಅಗ್ನಿ ಶ್ರೀಧರ್ ರವರ ‘ದಾದಾಗಿರಿಯ ದಿನಗಳು’ ಆಧಾರಿತ, ಎಂ.ಪಿ.ಜಯರಾಜ್ ಆಗಿ ನಾನು ನಟಿಸುತ್ತಿರುವ ಸಿನಿಮಾದ ಶೀರ್ಷಿಕೆ ಇದೇ ಆಗಸ್ಟ್ 15 ರಂದು ನಮ್ಮ ನೆಚ್ಚಿನ ಪುನೀತ್ ರಾಜಕುಮಾರ್ ರವರು ಬಿಡುಗಡೆ ಮಾಡಲಿದ್ದಾರೆ. ಅಶು ಬೇದ್ರ ನಿರ್ಮಾಣ ಹಾಗು ಶೂನ್ಯ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ' ಎಂದು ಹೇಳಿದ್ದಾರೆ.

ಈ ಚಿತ್ರದಲ್ಲಿ ಧನಂಜಯ್​, ಜಯರಾಜ್​ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದು, ಮಿಕ್ಕ ಪಾತ್ರಧಾರಿಗಳ ಆಯ್ಕೆ ನಡೆಯುತ್ತಿದೆ. 80ರ ದಶಕದಲ್ಲಿ ಬೆಂಗಳೂರಿನ ಅಂಡರ್​ವರ್ಲ್ಡ್​ಲ್ಲಿ ನಡೆದ ಕೆಲವು ನೈಜ ಘಟನೆಗಳನ್ನು ಇಟ್ಟುಕೊಂಡು ಈ ಚಿತ್ರ ನಿರ್ಮಾಣವಾಗುತ್ತಿದೆ.