

ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ಯುವರತ್ನ ಸಿನಿಮಾ ಸದ್ದು ಮಾಡುತ್ತಿದೆ. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಮಾಸ್ ಅವತಾರವನ್ನೂ ಚಿತ್ರತಂಡ ಬಹಿರಂಗಪಡಿಸಿದೆ. ಆದರೆ, ಎಲ್ಲೋ ಒಂದು ಕಡೆ ಚಿತ್ರದ ನಾಯಕಿಯ ಲುಕ್ ಹೇಗಿರಲಿದೆ ಎಂಬ ಸಣ್ಣ ತುಣುಕನ್ನು ಹೊರಗೆಡವಿರಲಿಲ್ಲ ಚಿತ್ರತಂಡ. ಇದೀಗ ಆ ಕಾಯುವಿಕೆಗೆ ಬ್ರೇಕ್ ಬಿದ್ದಿದೆ. ಅಂದರೆ, ಚಿತ್ರದ ನಾಯಕಿ ಸಾಯೇಷಾ ಸೈಗಲ್ ಫಸ್ಟ್ ಲುಕ್ ರಿಲೀಸ್ ಮಾಡಿದೆ ಯುವರತ್ನ ಬಳಗ.
ಅಂದಹಾಗೆ, ಇಂದು ನಟಿ ಸಾಯೇಷಾ ಸೈಗಲ್ ಜನ್ಮದಿನ. ಆ ನಿಮಿತ್ತ ಅವರ ಲುಕ್ ಬಿಡುಗಡೆ ಮಾಡಿ ಜನ್ಮದಿನಕ್ಕೆ ಶುಭಕೋರಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ರಾಮ್. ಮುಂಬೈ ಮೂಲದ ಸಾಯೇಷಾ, ಬಾಲಿವುಡ್ ಸೇರಿ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿ ‘ಯುವರತ್ನ’ ಚಿತ್ರದ ಮೂಲಕ ಕನ್ನಡಕ್ಕೂ ಆಗಮಿಸಿದ್ದಾರೆ.
ಯುವರತ್ನ ಚಿತ್ರದಲ್ಲಿ ವಂದನಾ ಹೆಸರಿನ ಪಾತ್ರ ನಿಭಾಯಿಸುತ್ತಿರುವ ಸಾಯೇಷಾ, ಪುನೀತ್ಗೆ ಜೋಡಿಯಾಗಿದ್ದು, ಕಾಲೇಜು ಹುಡುಗಿಯಾಗಿ ಕಾಣಿಸಕೊಂಡಿದ್ದಾರೆ. ಇನ್ನುಳಿದಂತೆ ದಿಗಂತ್, ಧನಂಜಯ್, ಸೋನು ಗೌಡ ಸೇರಿ ಹಲವು ಸ್ಟಾರ್ ಕಲಾವಿದರು ಸಿನಿಮಾದಲ್ಲಿದ್ದು, ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.