ಸುಶಾಂತ್ ಸಿಂಗ್ ಸಾವಿನ ಬೆನ್ನಲ್ಲೇ, ಬಾಲಿವುಡ್ನಲ್ಲಿ ಯಾವುದೂ ಸರಿ ಇಲ್ಲ ಎಂಬುದು ಹೊರಬರುತ್ತಿದೆ. ಸ್ವಜನ ಪಕ್ಷಪಾತ (ನೆಪೊಟಿಸಂ)ದ ಬಗ್ಗೆ ಮಾತುಗಳು ಹೆಚ್ಚಾಗುತ್ತಿವೆ. ಇದೀಗ ಆ ನೆಪೋಟಿಸಂ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಮಾತನಾಡಿದ್ದಾರೆ. ಸುಶಾಂತ್ ಸಾವಿನ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅವರನ್ನು ಯಾರೂ ದೂರ ಮಾಡಲಿಲ್ಲ; ಅವರೇ ದೂರ ಮಾಡಿಕೊಂಡರು …
2017ರಲ್ಲಿ ಐಐಎಫ್ಎ ಅವಾರ್ಡ್ ಕಾರ್ಯಕ್ರಮದಲ್ಲಿ ನೆಪೊಟಿಸಂ ಬಗ್ಗೆ ಸುಶಾಂತ್ ಮುಕ್ತವಾಗಿ ಮಾತನಾಡಿದ್ದರು. ಆ ವಿಡಿಯೋ ತುಣುಕನ್ನು ಶೇರ್ ಮಾಡಿಕೊಂಡಿರುವ ಪ್ರಕಾಶ್ ರಾಜ್, ‘ನಾನೂ ಸಿನಿಮಾಕ್ಷೇತ್ರದಲ್ಲಿದ್ದೇನೆ. ಈ ನೆಪೊಟಿಸಂನಲ್ಲಿಯೇ ಬದುಕಿ ಪಾರಾಗಿ ಬಂದಿದ್ದೇನೆ. ಅದರಿಂದಾದ ಗಾಯಗಳು ನನ್ನ ಮಾಂಸಖಂಡಗಳಿಗಿಂತಲೂ ಆಳವಾಗಿವೆ. ಆದರೆ, ಈ ಎಳಸು ಹುಡುಗ ಸುಶಾಂತ್ ಸಿಂಗ್ ರಜಪೂತ್ಗೆ ಅದು ಆಗಿಬರಲಿಲ್ಲ. ಈ ಸಂಬಂಧ ನಾವು ಕಲಿಯಬೇಕಾದ್ದು ಬಹಳಷ್ಟಿದೆ.. ಎದ್ದೇಳಬೇಕಿದೆ.. ಧ್ವನಿ ಗೂಡಿಸಬೇಕಿದೆ.. ಸುಖಾ ಸುಮ್ಮನೆ ಕನಸುಗಳನ್ನು ಹೀಗೆ ಸಾಯಲು ಬಿಡಬಾರದು..’ ಎಂದು ಪ್ರಕಾಶ್ ರಾಜ್ ಮನಮುಟ್ಟುವಂತೆ ಬರೆದುಕೊಂಡಿದ್ದಾರೆ.
ಅಂದಹಾಗೆ, ಹಾಗೆ ಶೇರ್ ಮಾಡಿಕೊಂಡ ವಿಡಿಯೋದಲ್ಲಿ, ‘ನೆಪೊಟಿಸಂ ಇಲ್ಲಿ ಇಲ್ಲ ಎಂದಲ್ಲ. ಅದು ಎಲ್ಲೆಡೆ ಇದೆ. ಅದಕ್ಕೆ ನಾನೇನು ಮಾಡಲು ಆಗುವುದಿಲ್ಲ. ಪ್ರತಿಭಾನ್ವಿತ ಕಲಾವಿದರನ್ನು ನೀವು ಎಲ್ಲಿಯವರೆಗೂ ಪ್ರೋತ್ಸಾಹಿಸುವುದಿಲ್ಲವೋ ಆಗ ಸಿನಿಮಾ ಇಂಡಸ್ಟ್ರಿಯ ಅಡಿಪಾಯ ಅಲುಗಾಡುತ್ತದೆ’ ಎಂದು ಸ್ವಜನ ಪಕ್ಷಪಾತದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದರು ಸುಶಾಂತ್. (ಏಜೆನ್ಸೀಸ್)