ಬೆಂಗಳೂರು: ಪರಂವಃ ಎಂದರೆ ಮೊದಲು ನೆನಪಿಗೆ ಬರುವುದು ರಕ್ಷಿತ್ ಶೆಟ್ಟಿ. ಪರಂವಃ ಸ್ಟುಡಿಯೋಸ್ ಹೆಸರಿನಲ್ಲಿ ರಕ್ಷಿತ್ ಕೆಲವು ವರ್ಷಗಳಿಂದ ಚಿತ್ರಗಳನ್ನು ಮಾಡುತ್ತಾ ಬಂದಿದ್ದಾರೆ. ಈಗ ಅದೇ ಹೆಸರಿನಲ್ಲಿ ಹೊಸಬರ ತಂಡವೊಂದು ಸದ್ದಿಲ್ಲದೆ ಚಿತ್ರ ಮಾಡಿದ್ದು, ಇತ್ತೀಚೆಗೆ ಈ ಚಿತ್ರದ ಟೀಸರ್ವೊಂದು ಬಿಡುಗಡೆಯಾಗಿದೆ. 'ಡಾರ್ಲಿಂಗ್' ಕೃಷ್ಣ ಟೀಸರ್ ಬಿಡುಗಡೆ ಮಾಡಿದ್ದಾರೆ.
'ಪರಂವಃ' ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿರುವುದು ಸಂತೋಷ ಕೈದಾಳ. ಈ ಚಿತ್ರದ ಕುರಿತು ಮಾತನಾಡುವ ಅವರು, 'ನಾಟಕ ಸಿನಿಮಾ ನೋಡತಾ ಬೆಳೆದ ನಾನು ‘ಆರ್ಯನ್’ ಸಿನಿಮಾ ಮೂಲಕ ತಂತ್ರಜ್ಞನಾಗಿ ಚಿತ್ರರಂಗ ಪ್ರವೇಶ ಮಾಡಿದೆ. ನಾನು ಹಾಗೂ ಗೆಳೆಯ ಪ್ರೇಮ್ ಸಿನಿಮಾ ಮಾಡುವ ಎಂದು ಪ್ಲ್ಯಾನ್ ಮಾಡಿಕೊಂಡಾಗ ಒಳ್ಳೆಯ ಕಥೆ ಮಾಡಿಕೊಂಡು ಗೆಳೆಯರ ಸಹಕಾರದಿಂದ ಈ ಸಿನಿಮಾ ಮಾಡಿದ್ವಿ. ಈ ಚಿತ್ರಕ್ಕೆ ಸುಮಾರು ೨೦೦ ಜನ ಹಣ ಹಾಕಿದ್ದಾರೆ. ಕ್ರೌಡ್ಫಂಡಿಂಗ್ ಮೂಲಕ ತಯಾರಾಗಿರುವ ಈ ಚಿತ್ರವನ್ನು ತುಮಕೂರು ಸುತ್ತಮುತ್ತ ಶೂಟಿಂಗ್ ಮಾಡಲಾಗಿದ್ದು, ಇದರಲ್ಲಿ ವೀರಗಾಸೆಯನ್ನೇ ವೃತ್ತಿಯಾಗಿ ಬಳಸಿಕೊಂಡ ಕುಟುಂಬದ ಕಥೆಯ ಜತೆಗೆ ಇಂದಿನ ಯುವ ಜನಾಂಗದ ಜೀವನ ಶೈಲಿಯ ಬಗ್ಗೆ ತೋರಿಸಲಾಗಿದೆ' ಎನ್ನುತ್ತಾರೆ.
ಈ ಚಿತ್ರದಲ್ಲಿ ನಾಯಕನಾಗಿ ಪ್ರೇಮ್ ನಟಿಸಿದ್ದಾರೆ. ಈ ಚಿತ್ರದ ಕಥೆ ಮೈಸೂರು ದಸರಾದಿಂದ ಪ್ರಾರಂಭವಾಗುತ್ತದಂತೆ. ಈ ಚಿತ್ರದಲ್ಲಿ ನಾನು ಹೀರೋ ಅಲ್ಲ, ಕಂಟೆಂಟ್ ಹೀರೋ. ಚಿತ್ರದಲ್ಲಿ ನನಗೆ ನಾಲ್ಕೈದು ಗೆಟಪ್ಗಳಿವೆ. ಚಿತ್ರದಲ್ಲಿ ಮೈಸೂರು ದಸರಾದಿಂದ ಕಥೆ ಶುರುವಾಗುತ್ತದೆ. ವೀರಗಾಸೆ ಕುಟುಂಬದಿಂದ ಬಂದಂತ ಹುಡುಗ ಎನೆಲ್ಲಾ ಆಗುತ್ತಾನೆ ಎಂಬುದು ಸಿನಿಮಾದ ಒಂದು ಲೈನ್ ಕಥೆ’ ಎನ್ನುತ್ತಾರೆ.
'ಪರಂವಾಃ' ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ಎ.ಎಸ್.ಶೆಟ್ಟಿ ಛಾಯಾಗ್ರಹಣ, ಅಪರಿಜಿತ್ ಹಾಗೂ ಜೋಸ್ ಜೊಸ್ಸಿ ಸಂಗೀತವಿದೆ. ಮೈಸೂರು ಮೂಲದ ಮೈತ್ರಿ ನಾಯಕಿ ಪಾತ್ರ ಮಾಡಿದ್ದು, ತಂದೆ ಪಾತ್ರವನ್ನು ರಂಗಭೂಮಿ ಕಲಾವಿದ ಗಣೇಶ್ ಮಾಸ್ಟರ್ ನಿರ್ವಹಿಸಿದ್ದಾರೆ. ಉಳಿದ ತಾರಾಗಣದಲ್ಲಿ ಶೃತಿ, ಮುಕುಂದ ಮೈಗೂರ್, ಅವಿನಾಶ್, ಮಾಸ್ಟರ್ ಮಿತುನ್, ಮಾಸ್ಟರ್ ಭುವನ್, ಮುಂತಾದವರಿದ್ದಾರೆ.