ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಡಾ. ರಾಜಕುಮಾರ್, ಲೀಲಾವತಿ, ಡಾ. ಭಾರತಿ ವಿಷ್ಣುವರ್ಧನ್ ನಟಿಸಿದ್ದ ಪೌರಾಣಿಕ ಸಿನಿಮಾ ‘ಗಂಗೆ ಗೌರಿ’ 1967ರಲ್ಲಿ ಬಿಡುಗಡೆಯಾಗಿತ್ತು. ಇದೀಗ 57 ವರ್ಷಗಳ ನಂತರ ನಿರ್ದೇಶಕ ಬಿ.ಎ. ಪುರುಷೋತ್ತಮ್ ಓಂಕಾರ್ ಅದೇ ಹೆಸರಿನಲ್ಲಿ ಹೊಸ ಕಥೆ ಹೇಳಲು ಹೊರಟಿದ್ದಾರೆ.
ಇತ್ತೀಚೆಗಷ್ಟೆ ಚಿತ್ರದ ಮುಹೂರ್ತ ನೆರವೇರಿದ್ದು, ‘ಇದುವರೆಗೆ 27 ಸಿನಿಮಾಗಳನ್ನು ನಿರ್ದೇಶಿಸಿದ್ದೇನೆ. ಅವುಗಳಲ್ಲಿ 24 ಪೌರಾಣಿಕ ಚಿತ್ರಗಳು. ಶಿವಪುರಾಣದಲ್ಲಿ ಗಂಗೆ ಗೌರಿ ಸಂಬಂಧವೇನು? ಗಂಗೆ ಶಿವನ ತಲೆ ಮೇಲೆ ಇರಲು, ಗೌರಿ ಶಿವನ ತೊಡೆ ಮೇಲೆ ಕೂರಲು ಕಾರಣವೇನು? ಶಿವನಿಗೂ ವಿಧಿಯ ಕಾಟ ತಪ್ಪಿಲ್ಲ. ಶನಿದೇವನಿಂದ ಮೂವರೂ ಕಷ್ಟ ಅನುಭವಿಸುತ್ತಾರೆ. ಇಂತಹ ಅಂಶಗಳು ಚಿತ್ರದಲ್ಲಿರಲಿವೆ. ಸ್ವರ್ಗಲೋಕ, ಬ್ರಹ್ಮಲೋಕ ದೃಶ್ಯಗಳಿಗಾಗಿ ಸೆಟ್ ಮತ್ತು ಗ್ರಾಫಿಕ್ಸ್ ಬಳಸಲಿದ್ದೇವೆ. ಮೈಸೂರು, ಶ್ರೀರಂಗಪಟ್ಟಣ, ಊಟಿಯ ಸುಂದರ ತಾಣಗಳಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಸಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ಪುರುಷೋತ್ತಮ್.
ಇದನ್ನೂ ಓದಿ : ಇದನ್ನೂ ಓದಿ : ದರ್ಶನ್ ಹಿಂದಿದೆ ಈ ಮಹಾಶಕ್ತಿ…ಅಂದು ಸಾರಥಿ, ಇಂದು ಕಾಟೇರ, ಮತ್ತೆ ಜರುಗಿತು ಪವಾಡ
ಶಿವನ ಪಾತ್ರದಲ್ಲಿ ನಟಿಸುತ್ತಿರುವ ಗಣೇಶ್ ರಾವ್ ಕೇಸರ್ಕರ್ ಅವರಿಗೆ ಇದು 333ನೇ ಸಿನಿಮಾ. ಪಾತ್ರಕ್ಕಾಗಿ ತಾಂಡವ ನೃತ್ಯ ಕಲಿಯುತ್ತಿರುವ ಬಗ್ಗೆ ಅವರು ತಿಳಿಸಿದರು. ರಾಣೆಬೆನ್ನೂರಿನ ರಂಗಭೂಮಿ ಕಲಾವಿದೆ ರೂಪಾಲಿ, ‘ಗೌರಿ, ಪಾರ್ವತಿ ಮತ್ತು ದಾಕ್ಷಾಯಿಣಿ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದರು. ಈ ಹಿಂದೆ ಗ್ಲಾಮರ್ ಪಾತ್ರಗಳಲ್ಲಿ ನಟಿಸಿದ್ದ ನಿಖಿತಾ ಸ್ವಾಮಿ ಗಂಗೆ ಪಾತ್ರದಲ್ಲಿ ನಟಿಸಲಿದ್ದು, ಅವರಿಗಿದು ಮೊದಲ ಪೌರಾಣಿಕ ಚಿತ್ರ. ಜಯಸಿಂಹ ಮುಸುರಿ, ಶೋಭರಾಜ್, ಶ್ರೀನಿವಾಸ್, ಬಸವರಾಜ್, ಮಾಲಾ ಡಿಂಗ್ರಿ ನಾಗರಾಜ್, ಧನಲಕ್ಷ್ಮಿ, ಜಿಮ್ ಶಿವು, ರಕ್ಷಾ ಪ್ರಮುಖ ತಾರಾಗಣದಲ್ಲಿದ್ದಾರೆ.