ಚೆನ್ನೈ: ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ಸಂಯುಕ್ತಾ ಹೆಗ್ಡೆ ಪಡ್ಡೆ ಹುಡುಗರ ಫೇವರಿಟ್ ಎಂಬುದರಲ್ಲಿ ಸಂಶಯವೇ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದ ಬೆನ್ನಲ್ಲೇ ತಮಿಳು ಚಿತ್ರರಂಗದಲ್ಲಿ ಬೀಡು ಬಿಟ್ಟಿರುವ ಸಂಯುಕ್ತಾ, ತಮ್ಮ ಬೋಲ್ಡ್ ಪಾತ್ರಗಳ ಮೂಲಕವೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಭಾರೀ ಟ್ರೋಲ್ ಆಗುತ್ತಿದೆ. ಅದಕ್ಕೆ ಕಾರನ ಸಂಯುಕ್ತಾ ಧರಿಸಿರುವ ಬಟ್ಟೆ.
ನಿನ್ನೆಯಷ್ಟೇ ಸಂಯುಕ್ತಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ಡಾನ್ಸ್ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಡಾನ್ಸರ್, ಬಿಗ್ಬಾಸ್ ಸೀಸನ್ 7ರ ಸ್ಪರ್ಧಿ ಕಿಶನ್ ಬಿಳಗಲಿ ಜತೆ ಸಂಯುಕ್ತಾ ಹಾಟ್ ಆಗಿ ಡಾನ್ಸ್ ಮಾಡಿದ್ದಾರೆ. ಕೇವಲ ಡಾನ್ಸ್ ಮಾಡಿದ್ದರೆ ಟ್ರೋಲ್ ಆಗುತ್ತಿರಲಿಲ್ಲ. ಆದರೆ, ಸಂಯುಕ್ತಾ ಧರಿಸಿರುವ ಬಟ್ಟೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದೆ.
ವಿಡಿಯೋದಲ್ಲಿ ಶ್ವೇತ ವರ್ಣದ ತುಂಡುಡುಗೆಯನ್ನು ಸಂಯುಕ್ತಾ ಧರಿಸಿದ್ದಾರೆ. ಅರೆಬೆತ್ತಲೆ ಅವತಾರದಲ್ಲಿ ಕಾಣಿಸಿಕೊಂಡಿರುವು ನೆಟ್ಟಿಗರಿಗೆ ಸ್ವಲ್ಪವೂ ಇಷ್ಟವಾಗಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮೂಲಕ ಸಂಯುಕ್ತಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಡಾನ್ಸ್ ಚೆನ್ನಾಗಿದೆ ಆದರೆ, ಡ್ರೆಸ್ ಅತಿಯಾಯ್ತು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಡಾನ್ಸ್ ಮಾಡಿ ಮಾರೇ ಬೇಡ ಅನ್ನಲ್ಲ, ಆದರೆ ಮೊಣಕಾಲುವರೆಗಾದ್ರೂ ಹಾಕ್ಕೊಳ್ಳಿ, ಹಾಕೊಂಡ್ರೆ ಪ್ರಾಬ್ಲಮ್ ಇರುವುದಿಲ್ಲ ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ. ಅದೇನು ಬಟ್ಟೆ ಅಂತ ಹಾಕ್ತಿರೋ ಇನ್ನೇನು ಉಳಿದಿದೆ ಅಲ್ಲಿ ಎಂದು ಇನ್ನೊಬ್ಬ ನೆಟ್ಟಿಗ ಟೀಕೆ ಮಾಡಿದ್ದಾರೆ. ಮೂರು ಬಿಟ್ಟೋರು ಊರಿಗೆ ದೊಡ್ಡವರು, ಲೈಕ್ಸ್, ಕಾಮೆಂಟ್ಗೋಸ್ಕರ್ ಯಾವ ರೀತಿ ಬಿಚ್ಚಿಕೊಂಡು ಕುಣಿಯುತ್ತೀರಾ ನೋಡಿ ಎಂದೆಲ್ಲ ಕಾಮೆಂಟ್ ಸೆಕ್ಷನ್ನಲ್ಲಿ ಸಂಯುಕ್ತಾರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಮೆಂಟ್ಗಳಿಗೆ ಕಿಶನ್ ಬಿಳಗಲಿ ಪ್ರತಿಕ್ರಿಯೆ ನೀಡಿದ್ದು, ಮೊದಲಿಗೆ ನಾನು ಕಾಮೆಂಟ್ ಮಾಡಬಾರದು ಎಂದು ಭಾವಿಸಿದೆ. ಆದರೆ ನಾನು ಕೆಲವು ಕಾಮೆಂಟ್‌ಗಳನ್ನು ಓದಿದಾಗ, ಸರಿ ಇಲ್ಲ ಪ್ರತಿಕ್ರಿಯೆ ನೀಡಲೇಬೇಕು ಅನಿಸಿತು. ನೀವು ಟಿವಿ, ಚಲನಚಿತ್ರಗಳು, ಪ್ರಣಯ ಸಿನಿಮಾಗಳು, ವೆಬ್‌ಸರಣಿಗಳನ್ನು ನೋಡುವುದಿಲ್ಲವೇ? ಅದಕ್ಕಿಂತ ಇದು ಹೇಗೆ ಭಿನ್ನವಾಗಿದೆ? ನೀವು ನಿಮ್ಮ ಕುಟುಂಬ ಮತ್ತು ಮಕ್ಕಳೊಂದಿಗೆ ಚಲನಚಿತ್ರಗಳನ್ನು ನೋಡುತ್ತೀರಿ, ಅಲ್ಲಿ ರೂಪದರ್ಶಿಗಳು ಬೀಚ್‌ಗಳಿಂದ ಹೊರಬರುತ್ತಾರೆ ಮತ್ತು ಇದನ್ನು ನೋಡಿದವರು ಸಮಾಜದಲ್ಲಿ ಎಂಥಾ ಉದಾಹರಣೆ ಸೆಟ್ ಮಾಡುತ್ತಿದ್ದಾರೆ ನೋಡಿ ಎಂದು ಕಾಮೆಂಟ್ ಮಾಡುತ್ತಾರೆ. ನೀವು ಕಲೆಯನ್ನು ಗೌರವಿಸದೆ ಈ ರೀತಿಯ ಕಾಮೆಂಟ್‌ಗಳನ್ನು ಮಾಡುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ನರ್ತಕಿಯರು ಬ್ಯಾಲೆ ಡ್ಯಾನ್ಸ್ ಮಾಡುವಾಗ ಇದೇ ರೀತಿ ಧರಿಸುತ್ತಾರೆ ಮತ್ತು ಅದು ಅವಳ ಸೌಕರ್ಯವೂ ಆಗಿದೆ.
ದಯವಿಟ್ಟು ಗೂಗಲ್ ಮಾಡಿ ಬ್ಯಾಲೆ ಬಟ್ಟೆಗಳನ್ನು ಮತ್ತು ನರ್ತಕಿಯರ ನೃತ್ಯದ ಬಗ್ಗೆ ಮೊದಲು ತಿಳಿದುಕೊಳ್ಳಿ ಮತ್ತು ಆನಂತರ ಕಾಮೆಂಟ್ ಮಾಡಿದೆ ಎಂದು ಕಿಶನ್ ಅವರು ಟ್ರೋಲ್ ಮಾಡುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ.
ಅಂದಹಾಗೆ ಸಂಯುಕ್ತಾ, ಕಿರಿಕ್ ಪಾರ್ಟಿ ಸಿನಿಮಾ ಯಶಸ್ಸಿನ ಬಳಿಕ ಕನ್ನಡದ ಕೆಲವೇ ಸಿನಿಮಾಗಳಲ್ಲಿ ನಟಿಸಿದರು. ಅವಕಾಶಗಳು ಕಡಿಮೆಯಾದಂತೆ ತಮಿಳಿಗೆ ಹಾರಿದ ಬ್ಯೂಟಿ, ಜಯಂ ರವಿ ಅಭಿನಯಯದ ಕೋಮಲಿ ಸಿನಿಮಾ ಮೂಲಕ ಕಾಲಿವುಡ್ಗೆ ಪದಾರ್ಪಣೆ ಮಾಡಿದರು. ಬಳಿಕ ಪಪ್ಪಿ, ಥೇಲ್ ಹಾಗೂ ಮನ್ಮಥ ಲೀಲೆ ಸಿನಿಮಾದಲ್ಲಿ ನಟಿಸಿದ್ದಾರೆ. ಮಾನಾಡು ಖ್ಯಾತಿಯ ವೆಂಕಟ್ ಪ್ರಭು ನಿರ್ದೇಶನದ ಮನ್ಮಥ ಲೀಲೆ ಚಿತ್ರದಲ್ಲಿ ತಮ್ಮ ಬೋಲ್ಡ್ ಪಾತ್ರದ ಮೂಲಕವೇ ಸಂಯುಕ್ತಾ ಕಾಲಿವುಡ್ನಲ್ಲಿ ಭಾರೀ ಸದ್ದು ಮಾಡಿದ್ದಾರೆ. ಇನ್ನಷ್ಟು ಚಿತ್ರಗಳು ಅವರ ಕೈಯಲ್ಲಿವೆ. (ಏಜೆನ್ಸೀಸ್)