More

    ಸಂಪಾದಕೀಯ| ಬಾಧಿತರಿಗೆ ನೆರವು ಅಗತ್ಯ

    ರಾಜ್ಯದ 161 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ವಾಸ್ತವ ಸ್ಥಿತಿಯನ್ನು ಅರಿಯಲು ಕೇಂದ್ರ ಅಧ್ಯಯನ ತಂಡ ಅಕ್ಟೋಬರ್ ಮೊದಲ ವಾರದಲ್ಲಿ ರಾಜ್ಯದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದೆ. ಆದರೆ, ಇದೇ ಅವಧಿಯಲ್ಲಿ ರಾಜ್ಯದಲ್ಲಿ ಒಂದಿಷ್ಟು ಮಳೆ ಸುರಿಯುತ್ತಿರುವುದು ಈ ಅಧ್ಯಯನ ತಂಡಕ್ಕೆ ವಾಸ್ತವ ಹೊರತುಪಡಿಸಿ ಬೇರೆಯದೆ ಚಿತ್ರಣವನ್ನು ಕಲ್ಪಿಸಲು ಅವಕಾಶ ತಲೆದೋರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬರ ಕುರಿತಂತೆ ವಾಸ್ತವವನ್ನು ಅಂಕಿ- ಅಂಶಗಳು ಹಾಗೂ ಸಾಕ್ಷ್ಯಗಳ ಸಮೇತ ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಡುವ ಸವಾಲು ಹಾಗೂ ಜವಾಬ್ದಾರಿಯು ರಾಜ್ಯದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲಿದೆ.

    ಅತಿಹೆಚ್ಚು ಬಾಧೆಗೆ ಒಳಗಾದ ಗ್ರಾಮ ಹಾಗೂ ಪ್ರದೇಶಗಳಿಗೆ ಅಧ್ಯಯನ ತಂಡವನ್ನು ಕರೆದೊಯ್ಯುವ ನಿಟ್ಟಿನಲ್ಲಿ ಜಿಲ್ಲಾಡಳಿತಗಳು ಸ್ಥಳ ಗುರುತಿಸುವ ಕಾರ್ಯವನ್ನು ಮಾಡಿವೆ. ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ರಾಜ್ಯದೆಲ್ಲೆಡೆ ಕೃಷಿ ಹಾಗೂ ತೋಟಗಾರಿಕೆ ಬೆಳೆ ನಷ್ಟಕ್ಕೀಡಾಗಿರುವ ಅಂಶವನ್ನು ಕೇಂದ್ರ ತಂಡಕ್ಕೆ ಮನದಟ್ಟು ಮಾಡಿಕೊಡುವುದು ಬಹುಮುಖ್ಯವಾಗಿದೆ. ಬರಪೀಡಿತ ಪ್ರದೇಶದ ಬೆಳೆಗಳ ಚಿತ್ರ ಮತ್ತು ವಿಡಿಯೋ, ಪವರ್ ಪಾಯಿಂಟ್ ಮೂಲಕವು ಬರ ಪರಿಸ್ಥಿತಿಯನ್ನು ವಿವರಿಸಲು ಕೆಲ ಜಿಲ್ಲಾಡಳಿತ ತಯಾರಿ ಮಾಡಿಕೊಂಡಿವೆ. ಈ ಹಿಂದಿನ ವರ್ಷಗಳಲ್ಲಿ ಕೂಡ ಕೇಂದ್ರ ತಂಡಗಳು ಬರ ಅಧ್ಯಯನಕ್ಕೆ ಆಗಮಿಸಿವೆ. ಆದರೆ, ಇದರಿಂದ ಪ್ರಯೋಜನವಾಗಿಲ್ಲ ಎಂಬುದು ರೈತರು ಹಾಗೂ ರೈತ ಸಂಘಟನೆಗಳ ಆರೋಪವಾಗಿದ್ದು, ಈ ಬಾರಿಯಾದರೂ ಸೂಕ್ತ ಪರಿಹಾರವನ್ನು ಕೇಂದ್ರದಿಂದ ಪಡೆಯುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಮುನ್ನೆಚ್ಚರಿಕೆ ವಹಿಸಬೇಕಿದೆ.

    161 ತಾಲೂಕುಗಳು ತೀವ್ರ ಬರ ಹಾಗೂ 34 ತಾಲೂಕುಗಳು ಸಾಧಾರಣ ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೊಷಣೆ ಮಾಡಿದೆ. ರಾಜ್ಯದಲ್ಲಿ ಬರದಿಂದ ಅಂದಾಜು 30,432 ಕೋಟಿ ರೂಪಾಯಿ ಹಾನಿಯಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್) ಮಾನದಂಡದ ಪ್ರಕಾರ 4,860.13 ಕೋಟಿ ರೂಪಾಯಿ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ರಾಜ್ಯ ಸಚಿವ ಸಂಪುಟ ತೀರ್ವನಿಸಿದೆ. ಬರದಿಂದ 39.74 ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿ 27,867.17 ಕೋಟಿ ಮೊತ್ತದ ಕೃಷಿ ಬೆಳೆ ನಷ್ಟವಾಗಿದೆ. ಇದರಲ್ಲಿ ಎನ್​ಡಿಆರ್​ಎಫ್ ಮಾನದಂಡದ ಪ್ರಕಾರ 3,824.67 ಕೋಟಿ ರೂಪಾಯಿ ಪರಿಹಾರವನ್ನು ಕೇಂದ್ರದಿಂದ ಕೋರಲು ಉದ್ದೇಶಿಸಲಾಗಿದೆ.

    ಆದರೆ, ರಾಜ್ಯ ಸರ್ಕಾರವೇ ಸಂಪುಟ ಸಮಿತಿ ಮೂಲಕ ಲೆಕ್ಕ ಹಾಕಿರುವ ಬರದ ನಷ್ಟವು 30 ಸಾವಿರ ಕೋಟಿ ರೂಪಾಯಿಗೂ ಅಧಿಕವಾಗಿದ್ದರೂ ಕೇಂದ್ರ ಸರ್ಕಾರದಿಂದ ಇದರಲ್ಲಿ ಅಲ್ಪ ಪ್ರಮಾಣದ ಪರಿಹಾರ ಕೋರಿರುವುದು ಅಚ್ಚರಿ ಮೂಡಿಸುವಂತಿದೆ. ಅಲ್ಲದೆ, ಈ ಬೇಡಿಕೆಯಲ್ಲಿ ಕೇಂದ್ರ ಸರ್ಕಾರವು ಎಷ್ಟು ಪ್ರಮಾಣಕ್ಕೆ ಒಪ್ಪಿಗೆ ಸೂಚಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಬಹುಶಃ ಈ ವಾಸ್ತವದ ಹಿನ್ನೆಲೆಯಲ್ಲಿಯೇ, ಬರ ಘೋಷಣೆಗೆ ವಿಧಿಸಿರುವ ಮಾನದಂಡಗಳನ್ನು ಬದಲಾಯಿಸುವಂತೆ ಈಗಾಗಲೇ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಒಟ್ಟಾರೆಯಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಉದಾರ ನೀತಿ ಅನುಸರಿಸುವ ಮೂಲಕ ಬರದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವಾಗಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts