ವಿಜಯವಾಣಿ ಸುದ್ದಿಜಾಲ ಬೆಂಗಳೂರು:
‘ಪ್ರೇಮಂ ಪೂಜ್ಯಂ’ ಚಿತ್ರದ ಬಳಿಕ ‘ನೆನಪಿರಲಿ’ ಪ್ರೇಮ್ ನಟಿಸುತ್ತಿರುವ ಸಿನಿಮಾ ‘ಪಿಂಕ್ ನೋಟ್’. ಅವರಿಗೆ ಈ ಚಿತ್ರದಲ್ಲಿ ಭಾವನಾ ಮೆನನ್ ಜೋಡಿಯಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಲಯಾಳಂ ಚಿತ್ರಗಳಲ್ಲಿ ಬಿಜಿಯಿದ್ದ ಭಾವನಾ, ಇದೀಗ ‘ಪಿಂಕ್ ನೋಟ್’ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ಗೆ ವಾಪಸ್ಸಾಗಿದ್ದಾರೆ. ರಕ್ಷಣ್ ರುದ್ರೇಶ್ ‘ಪಿಂಕ್ ನೋಟ್’ಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.
ಡಿ. 9ರಿಂದ ಚಿತ್ರತಂಡ ದುಬೈನಲ್ಲಿ ಬೀಡು ಬಿಟ್ಟಿದ್ದು, 30 ದಿನಗಳ ಕಾಲ ಶೂಟಿಂಗ್ ನಡೆಸಲು ಶೆಡ್ಯುಲ್ ಪ್ಲ್ಯಾನ್ ಮಾಡಿಕೊಂಡಿದೆ. ದುಬೈ ಜತೆ ಆಜರ್‌ಬೈಜಾನ್‌ನ ಬಾಕು ನಗರದಲ್ಲೂ ಚಿತ್ರೀಕರಣ ನಡೆಸಲಿದ್ದು, ಹೊಸ ವರ್ಷಕ್ಕೆ ‘ಪಿಂಕ್ ನೋಟ್’ ಚಿತ್ರತಂಡ ವಾಪಸ್ಸಾಗಲಿದೆ. ಪ್ರೇಮ್, ಭಾವನಾ ಜತೆ ಶ್ರೀನಿವಾಸ್ ಪ್ರಭು, ಪದ್ಮಜಾ ರಾವ್, ಗಿರೀಶ್ ಶಿವಣ್ಣ, ಮುನಿ, ಸಿಂಚನಾ, ಶೈಲಜಾ ಪ್ರಮುಖ ತಾರಾಗಣದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಸೆಲ್ವಂ ಮಾದಪ್ಪನ್ ಛಾಯಾಗ್ರಹಣ, ಜೆಸ್ಸಿ ಗ್‌ಟಿ ಸಂಗೀತ, ಕೆ.ಎಂ. ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಧನು ಮಾಸ್ಟರ್ ನೃತ್ಯ ಸಂಯೋಜನೆ ಇರಲಿದೆ.
‘ಪಿಂಕ್ ನೋಟ್’ ಜತೆ ಪ್ರೇಮ್ ಇನ್ನೂ ಹೆಸರಿಡದ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಭಾವನಾ ಮೆನನ್ ಸಹ ಕನ್ನಡದ ‘ಕೇಸ್ ಆ್ ಕೊಂಡಾಣ’, ಮಲಯಾಳಂ ಚಿತ್ರ ‘ಹಂಟ್’ ಹಾಗೂ ತಮಿಳಿನ ‘ದಿ ಡೋರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.