ಸಿನಿವಾಣಿ

ಐಆರ್​ಎಸ್​ ಅಧಿಕಾರಿ ಜತೆಗಿನ ಸಂಬಂಧದ ಬಗ್ಗೆ ಇಡಿ ವಿಚಾರಣೆ: ನೋವು ತೋಡಿಕೊಂಡ ನಟಿ ನವ್ಯಾ ನಾಯರ್​!

ರಮೇಶ್​ ಕುಮಾರ್​​ ಬಿ ಎಡಮೋಳೆ

ಕೊಚ್ಚಿ: ಆಸ್ತಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಪ್ರಕರಣದಲ್ಲಿ ಇತ್ತೀಚೆಗೆ ಬಂಧನವಾಗಿರುವ ಐಆರ್​ಎಸ್​ ಅಧಿಕಾರಿ ಸಚಿನ್​ ಸಾವಂತ್​ ಜತೆ ಮಲಯಾಳಂ ನಟಿ ನವ್ಯಾ ನಾಯರ್​ಗೆ ಇರುವ ಸಂಬಂಧದ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ನವ್ಯಾರನ್ನು ಇಡಿ ವಿಚಾರಣೆ ಕೂಡ ಮಾಡಿದೆ. ಇದರ ಬೆನ್ನಲ್ಲೇ ನವ್ಯಾ ಅವರು ಇನ್​ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದಕ್ಕೆ ನೀಡಿರುವ ಅಡಿಬರಹ ಎಲ್ಲರ ಗಮನ ಸೆಳೆದಿದೆ.

ಸಚಿನ್​ ಸಾವಂತ್​ ಮತ್ತು ನವ್ಯಾ ನಾಯರ್​ ನಡುವೆ ನಿಕಟ ಸಂಪರ್ಕವಿದ್ದು, ದುಬಾರಿ ಚಿನ್ನಾಭರಣವನ್ನು ನವ್ಯಾ ಅವರು ಸಚಿನ್​ರಿಂದ ಉಡುಗೊರೆಯಾಗಿ ಪಡೆದಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲದೆ, ಇಬ್ಬರು ಡೇಟಿಂಗ್​ ಮಾಡುತ್ತಿದ್ದರು ಎಂಬ ಸುದ್ದಿಯೂ ಹರಿದಾಡುತ್ತಿದೆ. ಈ ಪ್ರಕರಣದಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿರುವುದರಿಂದ ನವ್ಯಾ ಅವರು ಸಹಜವಾಗಿಯೇ ಮಾನಸಿಕ ತೊಂದರೆಗೆ ಒಳಗಾಗಿದ್ದಾರೆ.

ಇದೀಗ ಡಾನ್ಸ್​ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿರುವ ನವ್ಯಾ, ನೋವಿನಲ್ಲಿದ್ದಾಗಲೂ ಡಾನ್ಸ್​ ಮಾಡಿ, ಹೋರಾಟದ ಸಮಯದಲ್ಲೂ ಡಾನ್ಸ್ ಮಾಡಿ​ ಮತ್ತು ನಿಮ್ಮ ರಕ್ತದ ಕಣ ಕಣದಲ್ಲೂ ಡಾನ್ಸ್ ಮಾಡಿ ಎಂದು ಅಡಿಬರಹ ನೀಡಿದ್ದಾರೆ. ಏನೇ ನೋವಿರಲಿ ನನಗೆ ಡಾನ್ಸ್​ ಔಷಧಿ ಎಂಬರ್ಥದಲ್ಲಿ ಹೇಳಿದಂತಿದೆ.

ಇನ್ನೊಂದು ವಿಡಿಯೋದಲ್ಲಿ ಬಿಳಿ ದಿರಿಸಿನ ಫೋಟೋಗಳನ್ನು ಹಂಚಿಕೊಂಡಿರುವ ನವ್ಯಾ, ಪ್ರತಿಯೊಂದು ಹೃದಯವು ಅನೇಕ ಗಾಯಗಳನ್ನು ಮರೆಮಾಡುತ್ತದೆ ಮತ್ತು ಅದು ಎಂದಿಗೂ ರಕ್ತಸ್ರಾವ ಆಗುವುದಿಲ್ಲ ಎಂದಿದ್ದಾರೆ. ಈ ಎರಡು ವಿಡಿಯೋಗಳು ಪ್ರಸ್ತುತ ಅವರ ಜೀವನದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಪೂರಕವಾಗಿದೆ. ಅನೇಕ ವಂದತಿಗಳಿಂದ ನವ್ಯಾ ಅವರು ನೊಂದಿದ್ದು, ವಿಡಿಯೋ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ?

ನವ್ಯಾ ಅವರು ಐಆರ್​ಎಸ್​ ಅಧಿಕಾರಿ ಸಚಿನ್​ ಸಾವಂತ್​ರಿಂದ ದುಬಾರಿ ಉಡುಗೊರೆ ಪಡೆದಿರುವುದು ಇಡಿ ತನಿಖೆಯಿಂದ ಬಯಲಾಗಿದೆ. ಈ ಸುದ್ದಿ ಕೇರಳದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ ನವ್ಯಾ ಅವರ ಕುಟುಂಬದ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಚಿನ್ ಅವರು ಬಹಳ ಹಿಂದಿನಿಂದಲೂ ನಮಗೆ ಪರಿಚಿತರು. ಅವರು ಅನೇಕ ಬಾರಿ ಗುರುವಾಯೂರು ದೇವಸ್ಥಾನಕ್ಕೆ ಬಂದಾಗ ಅವರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಿದೆವು. ನವ್ಯಾ ಅವರ ಪುತ್ರನ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿರುವುದನ್ನು ಬಿಟ್ಟರೆ, ಅವರಿಂದ ಬೇರೆ ಯಾವುದೇ ಉಡುಗೊರೆ ಪಡೆದಿಲ್ಲ ಎಂದು ಇಡಿ ವಿಚಾರಣೆ ವೇಳೆ ಹೇಳಿದೆ.

10 ಬಾರಿ ಭೇಟಿ

ಆದರೆ, ನವ್ಯಾ ಹಾಗೂ ಸಚಿನ್​ ಸಂಬಂಧದ ಬಗ್ಗೆ ಇಡಿ ಅಧಿಕಾರಿಗಳಿಗೆ ಅನುಮಾನ ಮೂಡಿದೆ. ಸಚಿನ್ ಸಾವಂತ್ ಮತ್ತು ನವ್ಯಾ ಇಬ್ಬರ ಫೋನ್ ವಿವರಗಳನ್ನು ಪರಿಶೀಲಿಸಿದ್ದಾರೆ. ನಟಿಯನ್ನು ಭೇಟಿಯಾಗಲು ಸಚಿನ್​ ಅವರು 8 ರಿಂದ 10 ಬಾರಿ ಕೊಚ್ಚಿಗೆ ಹೋಗಿದ್ದರು ಎಂದು ವರದಿಯಾಗಿದೆ. ಅಲ್ಲದೆ, ಇಬ್ಬರ ನಡುವೆ ವಾಟ್ಸ್​ಆ್ಯಪ್​ ಚಾಟ್​​ ಕೂಡ ನಡೆದಿದೆ. ಆದರೆ, ನಾವಿಬ್ಬರು ಸ್ನೇಹಿತರು ಮಾತ್ರ, ನಮ್ಮ ನಡುವೆ ಬೇರೆ ಸಂಬಂಧ ಏನೂ ಇಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ನವ್ಯಾ ನಾಯರ್​ ಬಗ್ಗೆ ಮಾಹಿತಿ ನಮೂದಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ. 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಚಿನ್ ಸಾವಂತ್ ಅವರನ್ನು ಬಂಧಿಸಲಾಗಿದೆ. ಕಸ್ಟಮ್ಸ್ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಜೂನ್ 27ರಂದು ಲಕ್ನೋದಲ್ಲಿ ಸಚಿನ್​ರನ್ನು ಇಡಿ ಬಂಧಿಸಿತು.

ನಟಿ ನವ್ಯಾ ನಾಯರ್​ ಅವರು ದರ್ಶನ್​ ಅಭಿನಯದ ಗಜ, ಬಾಸ್​ ಹಾಗೂ ರವಿಚಂದ್ರನ್​ ಅಭಿನಯದ ದೃಶ್ಯ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಸದ್ಯ ಮಲಯಾಳಂ ಸಿನಿ ರಂಗದಲ್ಲಿ ಬಿಜಿಯಾಗಿದ್ದು, ಇದರ ನಡುವೆ ನವ್ಯಾಗೆ ಇಡಿ ಬಿಸಿ ಮುಟ್ಟಿಸಿದೆ. (ಏಜೆನ್ಸೀಸ್​)