ಮುಂಬೈ: ಬಾಲಿವುಡ್ ಗಾಯಕಿ ಸೋನಾ ಮೋಹಪತ್ರಾ ಅವರದ್ದು ಮನಸ್ಸಿಗೆ ತೋಚಿದ್ದನ್ನು ನೇರವಾಗಿ ಹೇಳುವ ವ್ಯಕ್ತಿತ್ವ. ತುಂಬಾ ಬೋಲ್ಡ್ ಆಗಿರುವ ಸೋನಾ ಇದೀಗ ಕಾಲೇಜು ದಿನಗಳಲ್ಲಿ ಈವ್ ಟೀಸಿಂಗ್, ಚುಡಾಯಿಸುವುದು ಮತ್ತು ಲೈಂಗಿಕ ಕಿರುಕುಳ ಅನುಭವಿಸಿದ್ದನ್ನು ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಈ ಬಗ್ಗೆ ಟ್ರೋಲ್ ಮಾಡುತ್ತಿರುವ ನೆಟ್ಟಿಗರಿಗೆ ಸೋನಾ ಅವರು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಲಿಂಗಾಧಾರಿತ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಅಂತ್ಯವಾಡುವ ಉದ್ದೇಶದಿಂದ ಬ್ಲ್ಯಾಂಕ್ ನಾಯ್ಸ್ ಸಮುದಾಯದ ನೇತೃತ್ವದಲ್ಲಿ ಜಾಲತಾಣದಲ್ಲಿ ಆರಂಭವಾಗಿರುವ #INeverAskForIt ಅಭಿಯಾನದಲ್ಲಿ ಸೋನಾ ಭಾಗಿಯಾಗಿದ್ದಾರೆ. ತಮಗಾದ ಅನುಭವವನ್ನು ಕಳೆದ ಸೋಮವಾರ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡು ಅಭಿಯಾನಕ್ಕೆ ಕೈಜೋಡಿಸಿದ್ದಾರೆ.
ಸಾಮಾನ್ಯವಾಗಿ ಲೈಂಗಿಕ ದೌರ್ಜನ್ಯವಾದಾಗ ಆ ಸಮಯದಲ್ಲಿ ಯಾವ ಉಡುಗೆ ಧರಿಸಿದ್ದೆ ಎಂದು ಸಂತ್ರಸ್ತರನ್ನು ಕೇಳುತ್ತಾರೆ. ಅಂದರೆ, ಸಂತ್ರಸ್ತೆಯನ್ನೇ ದೂಷಿಸುತ್ತಾರೆ. ಇದೇ ವಿಚಾರದಲ್ಲಿ ಮೇಲೆ ಟ್ವೀಟ್ ಮಾಡಿರುವ ಸೋನಾ, ನಾನು ಬಿಟೆಕ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದ ಸಮಯದಲ್ಲಿ ಒಮ್ಮೆ ಮೈಕ್ರೋಪ್ರೊಸೆಸ್ಸರ್ ಲ್ಯಾಬ್ಗೆ ಹೋಗುತ್ತಿದ್ದೆ. ದೊಗಲವಾದ ಹಸಿರು ಖಾದಿ ಕುರ್ತಾ ಜತೆಗೆ ಸಲ್ವಾರ್ ತೊಟ್ಟಿದ್ದೆ. ಈ ವೇಳೆ ನಮ್ಮ ಸೀನಿಯರ್ ಶಿಳ್ಳೆ ಹೊಡೆಯುತ್ತಾ ನನ್ನ ಬ್ರಾ ಸೈಜ್ ಬಗ್ಗೆ ಜೋರಾಗಿ ಮಾತನಾಡುತ್ತಿದ್ದರು. ಈ ವೇಳೆ ಹಿತೈಶಿ ಒಬ್ಬರು ನನ್ನ ಬಳಿ ಬಂದರು. ಏಕೆ, ನನ್ನ ಸ್ತನಗಳು ಸಂಪೂರ್ಣ ಮುಚ್ಚಿರುವಂತೆ ನಾನು ದುಪ್ಪಟ್ಟವನ್ನು ಸರಿಯಾಗಿ ಧರಿಸಿಲ್ವಾ ಎಂದು ನನ್ನನ್ನೇ ದೂರಿದರು ಎಂದು ಸೋನಾ ತಿಳಿಸಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ವಿಕ್ಟಿಮ್ ಬ್ಲೇಮಿಂಗ್ (ಬಲಿಪಶುವನ್ನೇ ದೂಷಿಸುವುದು) ಅನುಭವವನ್ನು ಶೇರ್ ಮಾಡಿಕೊಳ್ಳಿ ಬಾಲಿವುಡ್ ನಟಿ, ಸೋನಮ್ ಕಪೂರ್, ಗಾಯಕಿ ಚಿನ್ಮಯಿ ಶ್ರೀಪಾದ ಮತ್ತು ಇತರೆ ಸೆಲಿಬ್ರೆಟಿಗಳಿಗೆ ಸೋನಾ ಟ್ಯಾಗ್ ಮಾಡಿದ್ದಾರೆ. ನೀವು ಲೈಂಗಿಕ ಕಿರುಕುಳಕ್ಕೆ ಒಳಗಾದ ನೀವು ಧರಿಸಿದ್ದ ಬಟ್ಟೆ ಯಾವುದು ಎಂಬುದನ್ನು ನೆನೆಪಿಸಿಕೊಂಡು ವಿಕ್ಟಿಮ್ ಬ್ಲೇಮಿಂಗ್ ಗಮನಕ್ಕೆ ತನ್ನಿ ಎಂದಿದ್ದಾರೆ.
ಇದರ ನಡುವೆ ಸೋನಾ ಟ್ವೀಟ್ಗೆ ಕಿಡಿಕಾರಿರವು ನೆಟ್ಟಿಗರು, ಸೋನಾ ಪ್ರಚಾರದ ಹಸಿವು ಹೆಚ್ಚಾಗಿದೆ ಎಂದು ಟ್ರೋಲ್ ಮಾಡಿದ್ದಾರೆ. ನೀವು ಇಷ್ಟೆಲ್ಲಾ ಚಿಂತಿಸುವುದಾದರೆ, ಎದೆ ಸೀಳು ಕಾಣುವಂತೆ ಫೋಟೋಶೂಟ್ ಏಕೆ ಮಾಡಿಸುತ್ತೀರಿ. ಇಷ್ಟೇಲ್ಲಾ ನಾಟಕ ಮಾಡುವ ಬದಲು ಹಾಡುಕೊಂಡು ಸುಮ್ಮನಿರಿ. ನಿಮ್ಮ ಫೋಟೋಗಳಲ್ಲೇ ನೀವು ಎಕ್ಸ್ಪೋಸ್ ಮಾಡುತ್ತೀರಾ ಎಂದು ಟೀಕಿಸಿದ್ದಾರೆ.
ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಸೋನಾ, ನನ್ನ ದೇಹ, ನನ್ನಿಷ್ಟ ಮಿಸ್ಟರ್ ಜೇ, ನೀನ್ಯಾರು ಕೇಳೋಕೆ. ನನಗೆ ಏನು ಇಷ್ಟವೋ ನಾನು ಅದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ. ಅನೇಕರು ಸೋನಾ ಮಾತಿಗೆ ಬೆಂಬಲ ನೀಡಿದ್ದರೆ, ಕೆಲವರು ಸೋನಾ ವಿರುದ್ಧ ಸಮರ ಸಾರಿದ್ದಾರೆ. (ಏಜೆನ್ಸೀಸ್)