ಜನವರಿ ಮೂರನೇ ವಾರದಿಂದ ಕನ್ನಡದ ಬಿಗ್​ಬಾಸ್​ ಶುರು; ಈ ಸಲದ ವಿಶೇಷತೆ ಏನು ಗೊತ್ತಾ?

Kiccha1
Published on

ಬೆಂಗಳೂರು: ಕರೊನಾ ಇರಲಿಲ್ಲ ಎಂದಿದ್ದರೆ, ಇಷ್ಟೊತ್ತಿಗಾಗಲೇ ಕನ್ನಡದ ಬಿಗ್​ಬಾಸ್ ಸೀಸನ್​ 8 ಶುರುವಾಗಿರುತ್ತಿತ್ತು. ಆದರೆ, ಲಾಕ್​ಡೌನ್​ ಹಿನ್ನೆಲೆಯಲ್ಲಿ ಅದ್ಯಾವುದೂ ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಈ ವರ್ಷದ ಬಿಗ್​ಬಾಸ್ ನಡೆಯುವುದೇ ಇಲ್ಲ ಎಂಬಂಥಹ ಸುದ್ದಿಗಳು ಹರಿದಾಡಿದ್ದವು. ಪ್ರೇಕ್ಷಕ ವಲಯದಲ್ಲಿ ಈ ವಿಚಾರ ಒಂದಷ್ಟು ಬೇಸರಕ್ಕೆ ಕಾರಣವಾಗಿತ್ತು. ಇದೀಗ ಬಿಗ್​ಬಾಸ್​ ಮತ್ತೆ ಆರಂಭವಾಗಲಿದೆ ಎಂಬುದಕ್ಕೆ ಸಣ್ಣ ಸುಳಿವೊಂದು ಸಿಕ್ಕಿದೆ.

ಹೌದು, ಎಂದಿನಂತೆ ಕಲರ್ಸ್​ ಕನ್ನಡದಲ್ಲಿ ಬಿಗ್​ಬಾಸ್​ ಶುರುವಾಗಬೇಕಿದೆ. ಈಗಾಗಲೇ ಕೈ ಬಿಟ್ಟಿದ್ದ ರಿಯಾಲಿಟಿ ಶೋವನ್ನು ಮತ್ತೆ ಪ್ರೇಕ್ಷಕರೆದುರು ತರಬೇಕೆಂಬ ನಿಟ್ಟಿನಲ್ಲಿ ತೆರೆಮರೆಯಲ್ಲಿ ತಯಾರಿಯೂ ಶುರುವಾಗಿದ್ದು, ಕಲರ್ಸ್ ಕನ್ನಡದ ಬಿಜಿನೆಸ್ ಹೆಡ್​ ಪರಮೇಶ್ವರ್ ಗುಂಡ್ಕಲ್​, ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್​ ಅವರನ್ನು ಭೇಟಿ ಮಾಡಿದ್ದಾರೆ. ಫೇಸ್​ಬುಕ್​ನಲ್ಲಿ ಸುದೀಪ್​ ಜತೆಗಿನ ಫೋಟೋವೊಂದನ್ನು ಶೇರ್​ ಮಾಡಿ, ಬಿಗ್​ಬಾಸ್​ನ ಹೊಸ ಸೀಸನ್​ ಬಗ್ಗೆ ಸುಳಿವು ನೀಡಿದ್ದಾರೆ.

ಅಂದಹಾಗೆ, ಜನವರಿ ಮೂರನೇ ವಾರದಿಂದ ಬಿಗ್​ಬಾಸ್​ ಶುರುವಾಗಲಿದೆ. ಒಟ್ಟು 15 ಮಂದಿ ಸ್ಫರ್ಧಿಗಳು ಇರಲಿದ್ದು, ಎಲ್ಲರೂ ಸೆಲೆಬ್ರಿಟಿಗಳೇ ಆಗಿರಲಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನೂ ಪಾಲಿಸಲಾಗುತ್ತಿದೆ. ಅದೇ ರೀತಿಯಲ್ಲಿ ಬಿಗ್​ಬಾಸ್​ ಮನೆಯನ್ನು ಸೆಟ್​ಅಪ್​ ಮಾಡುವ ಕೆಲಸವೂ ಈಗಾಗಲೇ ಶುರುವಾಗಿದೆಯಂತೆ. ಹಿಂದಿ ಬಿಗ್​ಬಾಸ್​ನಂತೆ ಕನ್ನಡದಲ್ಲಿಯೂ ಕರೊನಾ ಕಾನ್ಸೆಪ್ಟ್ ಅಳವಡಿಸಿಕೊಳ್ಳುವ ಸಾಧ್ಯತೆ ಇದೆ.

ಒಂದು ವೇಳೆ ಇದು ಫಲಪ್ರದವಾಗಿದ್ದೇ ಆದರೆ, ಜನವರಿಯಲ್ಲಿ ಸೀಸನ್​ 8 ಶುರುವಾಗುವ ಸಾಧ್ಯತೆ ಇದೆ. ಈಗಾಗಲೇ ಹಿಂದಿ ಮತ್ತು ತೆಲುಗು ಬಿಗ್​ಬಾಸ್ ರಿಯಾಲಿಟಿ ಶೋ ಆರಂಭವಾಗಿದ್ದು, ಕರೊನಾ ಹಿನ್ನೆಲೆಯಲ್ಲಿ ಕರೊನಾ ಪರಿಕಲ್ಪನೆಯಲ್ಲಿಯೇ ಸೆಟ್​ ನಿರ್ಮಾಣ ಮಾಡಿ ಶೋ ಆರಂಭವಾಗಿದೆ. ಅದೇ ರೀತಿ ಇದೀಗ ಕನ್ನಡದಲ್ಲಿಯೂ ನಡೆಯುವ ಬಗ್ಗೆ ಮಾತುಕತೆಗಳು ನಡೆದಿದ್ದು, ಶೀಘ್ರದಲ್ಲಿಯೇ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net