ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ತೆಲುಗಿನ ‘ಪ್ರೇಮಭಿಕ್ಷ’. ‘ರುದ್ರಾಕ್ಷಪುರಂ’ ಚಿತ್ರಗಳನ್ನು ನಿರ್ದೇಶಿಸಿರುವ ಆರ್.ಕೆ.ಗಾಂಧಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಭಕ್ತಿಪ್ರದಾನ ಸಿನಿಮಾ ‘ತ್ರಿಷ’. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಈ ಚಿತ್ರ ಮೂಡಿಬರುತ್ತಿದ್ದು, ಇತ್ತೀಚೆಗಷ್ಟೆ ಹೈದರಾಬಾದ್‌ನ ಮಿಯಾಪುರದಲ್ಲಿ ಮುಹೂರ್ತ ನೆರವೇರಿತು. ಭಕ್ತಿಪ್ರದಾನ ಮತ್ತು ಥ್ರಿಲ್ಲರ್ ಕಥೆ ಹೊಂದಿರುವ ಈ ಚಿತ್ರಕ್ಕೆ ‘ಸಂಭವಯಾಮಿ ಯುಗೇ ಯುಗೇ’ ಎಂಬ ಅಡಿಬರಹವಿದೆ. ಮುಳಬಾಗಿಲಿನ ವಿರೂಪಾಕ್ಷ ದೇವಾಲಯದಲ್ಲಿ ನಡೆದ ಸತ್ಯ ಘಟನೆಗಳನ್ನು ಆಧರಿಸಿದ ಕಥೆಯಿದು.
ಚಿತ್ರದಲ್ಲಿ ಶಿವನ ಪರಮಭಕ್ತ ವಿರೂಪಾಕ್ಷನ ಪಾತ್ರದಲ್ಲಿ ಪಂಚಭಾಷಾ ನಟ ಸುಮನ್ ಕಾಣಿಸಿಕೊಳ್ಳಲಿದ್ದಾರೆ. ಶಿವನೇ ಸರ್ವಸ್ವ ಎಂದು ನಂಬಿರುವ ಶಿವಭಕ್ತನಿಗೆ ಎದುರಾಗುವ ಸಮಸ್ಯೆಗಳು ಮತ್ತು ಅವುಗಳಿಂದ ಆ ಭಕ್ತ ಹೇಗೆ ಹೊರಬರುತ್ತಾನೆ ಎಂಬುದರ ಸುತ್ತ ‘ತ್ರಿಷ’ ಕಥೆ ಸಾಗುತ್ತದೆ. ಹೈದರಾಬಾದ್‌ನಲ್ಲಿ ನಾಲ್ಕು ದಿನಗಳ ಕಾಲ ಚಿತ್ರೀಕರಣ ಮಾಡಿರುವ ಚಿತ್ರತಂಡ ಇದೇ 26ರಿಂದ ಹೊಸಕೋಟೆಯ ಭಕ್ತರಹಳ್ಳಿ, ಚಿಕ್ಕಬಳ್ಳಾಪುರದ ಅಜ್ಜವಾರ ಮತ್ತು ಮುಳಬಾಗಿಲಿನ ವಿರೂಪಾಕ್ಷ ದೇವಾಲಯದಲ್ಲಿ ಶೂಟಿಂಗ್ ಮುಂದುವರಿಸಲಿದೆ.
ಇದನ್ನೂ ಓದಿ : ದೀಪಾವಳಿ ಹಬ್ಬದಂದು ‘ಬ್ಯಾಡ್ ಮ್ಯಾನರ್ಸ್’ ಸರಪಟಾಕಿ ! ಢಂ ಢಂ ಸೌಂಡ್ ನಡುವೆ ಅಭಿ ಡಿಶುಂ ಡಿಶುಂ ಫೈಟ್
ಚಿತ್ರಕ್ಕೆ ಎಂ.ಎಲ್. ರಾಜ ಸಾಹಿತ್ಯ ಮತ್ತು ಸಂಗೀತ, ಮುರಳಿಕೃಷ್ಣ ಛಾಯಾಗ್ರಹಣ, ನರಸಿಂಗ್ ರಾಥೋಡ್ ಸಂಕಲನವಿರಲಿದೆ. ಸುಮನ್ ಜತೆ ಸುರೇಶ್ ಸೂರ್ಯ, ಖುಷಿ ಗೌಡ, ಯುವೀನ, ಸುಪ್ರಿತಾ ರಾಜ್, ಮಹಾಂತೇಶ, ವಿರೂಪಾಕ್ಷಿ, ರವಿ, ಸುನಂದಾ ಪ್ರಮುಖ ತಾರಾಗಣದಲ್ಲಿದ್ದಾರೆ.