ಸಿನಿವಾಣಿ

ಆಸ್ಕರ್ಸ್​ನಲ್ಲಿ ಎಂ.ಎಂ. ಕೀರವಾಣಿ ಲೈವ್ ಕಾರ್ಯಕ್ರಮ​ …

ಲಾಸ್​ ಆಂಜಲೀಸ್​: ರಾಜಮೌಳಿ ನಿರ್ದೇಶನದ 'RRR' ಚಿತ್ರದ 'ನಾಟ್ಟು ನಾಟ್ಟು' ಹಾಡು ಆಸ್ಕರ್ಸ್​ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ. ಮಾರ್ಚ್​ 12ರಂದು ನಡೆಯುವ ಸಮಾರಂಭದಲ್ಲಿ ಆ ಹಾಡಿಗೆ ಪ್ರಶಸ್ತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಈ ಮಧ್ಯೆ, ಈ ಹಾಡನ್ನು ಸಂಯೋಜಿಸಿರುವ ಎಂ.ಎಂ. ಕೀರವಾಣಿ, ಅಲ್ಲಿ ಲೈವ್​ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ 'ನಾಟ್ಟು ನಾಟ್ಟು' ಸಹ ಪ್ರದರ್ಶನವಾಗಲಿದೆ.

ಈಗಾಗಲೇ 'RRR' ಚಿತ್ರವು ಕೆಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈಗಾಗಲೇ ಚಿತ್ರದ 'ನಾಟ್ಟು ನಾಟ್ಟು' ಹಾಡಿಗೆ ಗೋಲ್ಡನ್​ ಗ್ಲೋಬ್​ ಪ್ರಶಸ್ತಿ ಬಂದಿದೆ. 28ನೇ ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​ನ ಅತ್ಯುತ್ತಮ ವಿದೇಶಿ ಭಾಷೆಯ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವುದರ ಜತೆಗೆ 'ನಾಟು ನಾಟು' ಹಾಡಿಗೆ ಅತ್ಯುತ್ತಮ ಗೀತೆ ಪ್ರಶಸ್ತಿ ದೊರೆತಿದೆ. ಈಗ ಆಸ್ಕರ್ಸ್​ ರೇಸ್​ನಲ್ಲೂ ಈ ಹಾಡು ಇದ್ದು, ಈ ಹಾಡಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ, ಆ ಚಿತ್ರದ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರಿಗೆ ಸಿಗುವ ಸಾಧ್ಯತೆ ಇದೆ.

ಹೀಗಿರುವಾಗಲೇ ಕೀರವಾಣಿ ಅವರಿಗೆ ಆಸ್ಕರ್ಸ್​ ಸಮಾರಂಭದಲ್ಲಿ ಲೈವ್​ ಕಾರ್ಯಕ್ರಮ ನಡೆಸಿಕೊಡುವ ಒಂದು ಅಪರೂಪದ ಅವಕಾಶವೊಂದು ಸಿಕ್ಕಿದೆ. ಈ ಅವಕಾಶ ಸಿಕ್ಕಿರುವುದಕ್ಕೆ ಅವರಿಗೆ ಖುಷಿಯಾಗಿದ್ದರೂ, ಒಳಗೊಳಗೆ ಸಾಕಷ್ಟು ಟೆನ್ಶನ್​ ಸಹ ಇದೆ.

ಈ ಕುರಿತು ಮಾತನಾಡಿರುವ ಅವರು, 'ಆಸ್ಕರ್ಸ್​ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಗೆಲ್ಲುವ ನಂಬಿಕೆ ಇದೆ. ಆದರೆ, ಅಷ್ಟೊಂದು ಜನರ ಮಧ್ಯೆ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಸುಲಭವಲ್ಲ. ಅದಕ್ಕೆ ಸಾಕಷ್ಟು ತಯಾರಿ ಬೇಕು. ಸಾಕಷ್ಟು ರಿಹರ್ಸಲ್​ಗಳನ್ನು ಸಹ ಮಾಡಬೇಕು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ' ಎಂದು ಹೇಳಿಕೊಂಡಿದ್ದಾರೆ.

'RRR' ಚಿತ್ರವನ್ನು ವಿ.ವಿ. ದಾನಯ್ಯ ನಿರ್ಮಿಸಿದ್ದು, ಜ್ಯೂನಿಯರ್​ ಎನ್​ಟಿಆರ್​, ರಾಮ್​ಚರಣ್​ ತೇಜ, ಆಲಿಯಾ ಭಟ್​, ಅಜಯ್​ ದೇವಗನ್​ ಮುಂತಾದವರು ನಟಿಸಿದ್ದಾರೆ.