ಬೆಂಗಳೂರು: ಇದುವರೆಗೂ ನಟರಾಗಿ, ನಿರೂಪಕರಾಗಿ ಮತ್ತು ಮಿಮಿಕ್ರಿ ಪಟುವಾಗಿ ಗುರುತಿಸಿಕೊಂಡಿದ್ದ ಮಿಮಿಕ್ರಿ ದಯಾನಂದ್, 'ಅನಿರೀಕ್ಷಿತ' ಎನ್ನುವ ಚಿತ್ರದ ಮೂಲಕ ನಿರ್ದೇಶನ ಮಾಡಿರುವುದು ಗೊತ್ತೇ ಇದೆ. ಈಗ ಆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ರವಿಚಂದ್ರನ್, ಉಪೇಂದ್ರ, ತಾರಾ, ಸೃಜನ್ ಲೋಕೇಶ್ ಸೇರಿದಂತೆ ಸ್ಯಾಂಡಲ್ವುಡ್ನ ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೀಪಾವಳಿಗೆ ‘ಅಣ್ಣಾತ್ತೆ’ಯಾದರೆ, ದಸರಾಗೆ ‘ಆಚಾರ್ಯ’ …
ನಟರಾಗಿದ್ದವರು, ನಿರ್ದೇಶನಕ್ಕಿಳಿದಿದ್ದು ಅನಿರೀಕ್ಷಿತ ಎಂದು ಹೇಳಿಕೊಂಡಿರುವ ದಯಾನಂದ್, 'ಮಿಮಿಕ್ರಿ ಕಲಾವಿದನಾದ ನಾನು ನಿರ್ದೇಶನಕ್ಕೆ ಬಂದದ್ದು ಅನಿರೀಕ್ಷಿತ. ಲಾಕ್ಡೌನ್ ಸಮಯದಲ್ಲಿ ನಾವೊಂದಿಷ್ಟು ಜನ ಸಿನಿಮಾ ಮಾಡಬೇಕೆಂದು ಅಂದುಕೊಂಡೆವು. ಹದಿಮೂರು ಜನ ಪ್ರತಿಭಾವಂತರ ಪರಿಶ್ರಮದ ಫಲದಿಂದ ಈ ಚಿತ್ರ ನಿರ್ಮಾಣವಾಗಿದೆ. ಮಂಗಳೂರು ಹಾಗೂ ಕೇರಳದ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಕೇವಲ ಎರಡೇ ಪಾತ್ರಗಳು ಈ ಚಿತ್ರದಲ್ಲಿದ್ದು, ಕನ್ನಡ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ' ಎನ್ನುತ್ತಾರೆ.
ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿರುವ ಅವರು, 'ಸಮುದ್ರ ತೀರದ ಮನೆಯೊಂದರಲ್ಲಿ ಹೆಚ್ಚು ದಿನದ ಚಿತ್ರೀಕರಣ ನಡೆದಿದ್ದು, ಲಾಕ್ಡೌನ್ ಸಮಯವಾದುದ್ದರಿಂದ ಯಾರು ಆಚೆ ಹೋಗುವಂತರಲಿಲ್ಲ. ಅಡುಗೆ ಕೆಲಸದಿಂದ ಎಲ್ಲಾ ನಾವೇ ಮಾಡಿಕೊಂಡೆವು. ನನ್ನನ್ನು ಬಿಟ್ಟು ಕೇರಳದವರೇ ಆದ ಭಾಮ ಅರುಣ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸರ್ಕಾರ ಬಿಡುಗಡೆಗೆ ಸೂಚಿಸಿದ ಮೇಲೆ ಚಿತ್ರವನ್ನು ತೆರೆಗೆ ತರುತ್ತೇವೆ. ನಮ್ಮ ಚಿತ್ರದ ಟ್ರೇಲರ್ ನೋಡಿ ರವಿಚಂದ್ರನ್, ಉಪೇಂದ್ರ, ಸೃಜನ್ ಲೋಕೇಶ್ ಹಾಗೂ ತಾರಾ ಮೆಚ್ಚುಗೆ ಸೂಚಿಸಿ ಶುಭ ಕೋರಿದ್ದಾರೆ . ಅವರಿಗೆಲ್ಲಾ ತುಂಬು ಹೃದಯದ ಧನ್ಯವಾದಗಳು' ಎನ್ನುತ್ತಾರೆ ಮಿಮಿಕ್ರಿ ದಯಾನಂದ್.
ಎಸ್.ಕೆ.ಟಾಕೀಸ್ ಬ್ಯಾನರ್ನಲ್ಲಿ ಶಾಂತಕುಮಾರ್ ನಿರ್ಮಿಸಿರುವ ಈ ಚಿತ್ರಕ್ಕೆ ಸಂತೋಷ್ ಕೊಡಂಕೇರಿ, ರಘು ಎಸ್ ಹಾಗೂ ಮಿಮಿಕ್ರಿ ದಯಾನಂದ್ ಸಹನಿರ್ಮಾಪಕರಾಗಿದ್ದಾರೆ. ದಯಾನಂದ್ ಅವರೇ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆಯನ್ನು ನೆಳ್ಳುಳ್ಳಿ ರಾಜಶೇಖರನ್ ಬರೆದಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ. ಜೀವನ್ ಗೌಡ ಛಾಯಾಗ್ರಹಣ ಹಾಗೂ ರಘು ಅವರ ಸಂಕಲನ ಈ ಚಿತ್ರಕ್ಕಿದೆ.