ದೆಹಲಿ ಏರ್​ಪೋರ್ಟ್​ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ಹೊರಹಾಕಿದ ರಾಜಮೌಳಿ

Rajamouli - Final - New
Published on

ದೆಹಲಿ: 'ಬಾಹುಬಲಿ' ಖ್ಯಾತಿಯ ನಿರ್ದೇಶಕ ಎಸ್​.ಎಸ್​. ರಾಜಮೌಳಿ, ಸೋಷಿಯಲ್​ ಮೀಡಿಯಾ ಮೂಲಕ ಆಗಾಗ ತಮ್ಮ ಚಿತ್ರಗಳ ಅಪ್​ಡೇಟ್​ಗಳನ್ನು ಕೊಡುತ್ತಿರುತ್ತಾರೆ. ಆದರೆ, ಶುಕ್ರವಾರ ಬೆಳಿಗ್ಗೆ ಅವರು ಬೇರೆಯದೇ ವಿಷಯವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ದಾಖಲಿಸಿದ್ದಾರೆ.

ದೆಹಲಿ ಏರ್​ಪೋರ್ಟ್​ನ ಅವ್ಯವಸ್ಥೆಯ ಕುರಿತು ರಾಜಮೌಳಿ ಬೆಳಕು ಚೆಲ್ಲಿದ್ದು, ಅಲ್ಲಿನ ವ್ಯವಸ್ಥೆ ಸರಿಪಡಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಇಲ್ಲವಾದರೆ, ಹೊರದೇಶದವರಿಗೆ ಭಾರತದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ಸಾಧ್ಯತೆ ಇದೆ ಎಂದು ಅವರು ಬೇಸರಿಸಿಕೊಂಡಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಇಂದು ಬೆಳಿಗ್ಗೆ ಲುಫ್ತಾನ್ಸಾ ಫ್ಲೈಟ್​ನಿಂದ ದೆಹಲಿಗೆ ಬಂದೆ. ಎಲ್ಲರಿಗೆ ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಿಕೊಳ್ಳಲು ಮತ್ತು ಮಾಹಿತಿ ಸಂಗ್ರಹಿಸಲು, ಫಾರ್ಮ್​ಗಳನ್ನು ನೀಡಲಾಗಿತ್ತು. ಜನರೆಲ್ಲ ನೆಲದ ಮೇಲೆ ಕುಳಿತು ಅಥವಾ ಗೋಡೆಯ ಮೇಲೆ ಫಾರ್ಮ್​ಗಳನ್ನಿಟ್ಟುಕೊಂಡು ಬರೆಯುತ್ತಿದ್ದರು. ಕನಿಷ್ಠ ಟೇಬಲ್​ ವ್ಯವಸ್ಥೆ ಇಲ್ಲ. ಇನ್ನು ಎಕ್ಸಿಟ್​ ಗೇಟ್​ ಬಳಿ ಬೀದಿನಾಯಿಗಳು ಅಡ್ಡಾಡುತ್ತಿವೆ. ಹೊರಗಿನಿಂದ ಬಂದ ಯಾತ್ರಿಕರಿಗೆ ಇದರಿಂದ ನಮ್ಮ ದೇಶದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವ ಸಾಧ್ಯತೆ ಇದೆ. ದಯವಿಟ್ಟು ಅತ್ತ ಗಮನಹರಿಸಿ' ಎಂದು ಅವರು ಸಲಹೆ ನೀಡಿದ್ದಾರೆ.

ಇನ್ನು, ರಾಜಮೌಳಿ ನಿರ್ದೇಶನದ 'ಆರ್​ಆರ್​ಆರ್​' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಎರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಜ್ಯೂನಿಯರ್​ ಎನ್​ಟಿಆರ್ ಮತ್ತು ರಾಮ್​ಚರಣ್​ ಮೊದಲ ಬಾರಿಗೆ ಜತೆಯಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಅಜಯ್​ ದೇವಗನ್​, ಆಲಿಯಾ ಭಟ್​, ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net