ಸಿನಿವಾಣಿ

ನೋ ಆದರ್​ ವರ್ಕ್​, ಸೋ ವರ್ಕ್​ಔಟ್ ...

manjunathktgns

ಅಕ್ಷರಶಃ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದವರು ಮಲಯಾಳಂನ ಖ್ಯಾತ ನಟ ಮಮ್ಮೂಟ್ಟಿ. ವರ್ಷಕ್ಕೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಾ, ಆ ಸೆಟ್​ನಿಂದ ಈ ಸೆಟ್​ಗೆ ಓಡಾಡುತ್ತಾ ಸಕ್ರಿಯವಾಗಿದ್ದ ಅವರಿಗೆ, ಲಾಕ್​ಡೌನ್​ ಅದೆಷ್ಟು ಪೆಟ್ಟು ಕೊಟ್ಟಿದೆ ಎಂದರೆ ಅವರು ಮನೆಯಲ್ಲಿ ಕೂತುಕೂತು ಸುಸ್ತಾಗಿದ್ದಾರೆ.

ಇತ್ತೀಚೆಗಷ್ಟೇ ಅವರ ಮಗ ದುಲ್ಕರ್​ ಸಲ್ಮಾನ್​ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅಪ್ಪ, ಕಳೆದ 150 ದಿನಗಳಿಂದ ಮನೆಯಿಂದ ಹೊರಬರದೆ ಹೊಸ ದಾಖಲೆ ಬರೆದಿದ್ದಾರೆ ಎಂದು ಹೇಳಿಕೊಂಡಿದ್ದರು. 'ಲಾಕ್​ಡೌನ್​ ಘೋಷಣೆಯಾದಾಗ, ಮನೆಯಲ್ಲೇ ಎಷ್ಟು ದಿನ ಇರೋಕೆ ಸಾಧ್ಯ ಅನ್ನೋದನ್ನ ನೋಡಬೇಕು ಅಂತ ಅಂದುಕೊಂಡಿದ್ದರು. ಅದರಂತೆ ಅವರು ಕಳೆದ 150 ದಿನಗಳಿಂದ ಮನೆಯಿಂದ ಹೊರಬಂದಿಲ್ಲ' ಎಂದು ದುಲ್ಕರ್​ ಹೇಳಿದ್ದರು.

ಮಮ್ಮೂಟ್ಟಿ ಅವರೇನೋ ಮನೆಯಲ್ಲೇ ಇದ್ದಾರೆ. ಆದರೆ, ಮನೆಯಲ್ಲೇ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಬರುವುದು ಸಹಜ. ಅದಕ್ಕೆ ಮಮ್ಮೂಟ್ಟಿ ಅವರು ಕೊನೆಗೂ ಉತ್ತರ ಕೊಟ್ಟಿದ್ದಾರೆ. ತಮ್ಮ ವರ್ಕೌಟ್​ನ ಚಿತ್ರಗಳನ್ನು ಅವರು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಫೋಟೋಗಳನ್ನು ಹಂಚಿಕೊಳ್ಳುವುದರ ಜತೆಗೆ ಅವರು ತಮಾಷೆಯಾಗಿ ಬರೆದುಕೊಕಂಡಿದ್ದಾರೆ. 'ವರ್ಕ್​ ಅಟ್​ ಹೋಮ್​, ವರ್ಕ್​ ಫ್ರಮ್​ ಹೋಮ್​, ಹೋಮ್​ ವರ್ಕ್​, ನೋ ಆದರ್​ ವರ್ಕ್​, ಸೋ ವರ್ಕ್​ಔಟ್​' ಎಂದು ಬರೆದುಕೊಂಡಿದ್ದಾರೆ. ಮನೆಯಲ್ಲಿ ಮಾಡುವುದಕ್ಕೆ ಬೇರೇನು ಕೆಲಸವಿಲ್ಲದೆ ಇರುವುದರಿಂದ ವರ್ಕೌಟ್​ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.

ವರ್ಕೌಟ್​ ಮಾಡುವುದರ ಜತೆಗೆ, ತಮ್ಮ ಮೆಚ್ಚಿನ ಹಾಬಿಯಾಗಿರುವ ಫೋಟೋಗ್ರಫಿಯಲ್ಲೂ ಅವರು ತೊಡಗಿಸಿಕೊಂಡಿದ್ದು, ಮನೆಯ ಸುತ್ತಮುತ್ತಲ ಫೋಟೋಗಳನ್ನು ಆಗಾಗ ಕ್ಲಿಕ್​ ಮಾಡುತ್ತಲೇ ಇರುವುದಾಗಿ ಹೇಳಿಕೊಂಡಿದ್ದಾರೆ.