ಟಾಲಿವುಡ್ ಸ್ಟಾರ್ ನಟ ಪ್ರಿನ್ಸ್ ಮಹೇಶ್ ಬಾಬು ಅವರು ಸದ್ಯ ತಮ್ಮ ಮುಂಬರುವ ‘ಸರ್ಕಾರು ವಾರಿ ಪಾಟ’ ಚಿತ್ರದ ರಿಲೀಸ್ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ. ಕೋಟಿ ಕೋಟಿ ದುಡಿಯುವ ಮಹೇಶ್ ಬಾಬು ತಮ್ಮ ಆದಾಯದ 15% ಸಾಮಾಜಿಕ ಸೇವೆಗೆ ಬಳಸುತ್ತಾರೆ ಎಂಬ ಮಾತಿದೆ. ಹೌದು, ಮೊದಲಿನಿಂದಲೂ ಮಹೇಶ್ ಬಾಬು ಹಲವು ಜನಪರ ಕಾರ್ಯಗಳನ್ನು ಮಾಡುತ್ತಲೆ ಬಂದಿದ್ದಾರೆ. 1000 ಕ್ಕೂ ಹೆಚ್ಚು ಮಕ್ಕಳ ಹಾರ್ಟ್ ಸರ್ಜರಿಗೆ ಮಹೇಶ್ ಸಹಾಯ ಮಾಡಿರುವ ವಿಷಯ ಎಲ್ಲರಿಗೂ ತಿಳಿದೆಯಿದೆ. ಈಗ ಇನ್ನೊಂದು ಉತ್ತಮ ಕೆಲಸಕ್ಕೆ ಮಹೇಶ್ ಕೈ ಹಾಕಿದ್ದಾರೆ.
ಅಂದಹಾಗೆ, ಹೃದಯದ ಸಮಸ್ಯೆಯಿಂದ ಬಳಲುವ ಪುಟ್ಟ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಮಹೇಶ್ ಬಾಬು ಫೌಂಡೇಶನ್ ಮತ್ತೆ ಮುಂದೆ ಬಂದಿದೆ. ಮಕ್ಕಳ ಹಾರ್ಟ್ ಸರ್ಜರಿಗೆ ಈ ಸಂಸ್ಥೆ ನೆರವು ನೀಡಲಿದೆಯಂತೆ. ಈ ಕಾರ್ಯದಿಂದಾಗಿ ಮಹೇಶ್ ಅವರು ಹೃದಯವಂತ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೃದಯದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಸಿಕ್ಕಾಪಟ್ಟೆ ಚಿಂತಿಸುತ್ತಿದ್ದಾರೆ. ಯುವ ಜನರು ಹೃದಯಾಘಾತದಿಂದ ಮೃತರಾಗುತ್ತಿರುವ ಘಟನೆಗಳು ಪದೇ ಪದೇ ವರದಿ ಆಗುತ್ತಿದೆ.
ಅದರಲ್ಲಿಯೂ 30 ರಿಂದ 50 ವರ್ಷದೊಳಗಿನ ಬಹಳಷ್ಟು ಜನ ಹೃದಯಾಘಾತದಿಂದ ಮೃತರಾಗುತ್ತಿದ್ದಾರೆ. ಇನ್ನು, ಚಿಕ್ಕ ಮಕ್ಕಳಲ್ಲಿಯೂ ಹಲವು ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ, ಇಷ್ಟು ದಿನ ಕೇವಲ ತಮ್ಮ ಕಡೆಯಿಂದ ಸಹಾಯ ಮಾಡುತ್ತಿದ್ದ ಪ್ರಿನ್ಸ್ ಮಹೇಶ್ ಈಗ ಹೈದರಾಬಾದ್ನಲ್ಲಿನ ರೇನ್ಬೋ ಚಿಲ್ರನ್ಸ್ ಹಾರ್ಟ್ ಇನ್ಸ್ಟಿಟ್ಯೂಟ್ ಜೊತೆ ಕೈ ಜೋಡಿಸಿದ್ದು, ಪ್ಯೂರ್ ಲಿಟಲ್ ಹಾರ್ಟ್ ಫೌಂಡೇಶನ್ ಸ್ಥಾಪಿಸಿ, ಅದರ ಮೂಲಕ ಮಕ್ಕಳ ಹೃದಯದ ಚಿಕಿತ್ಸೆಗೆ ನೆರವು ನೀಡಲಿದ್ದಾರೆ.
ಕೆಲ ದಿನಗಳ ಹಿಂದೆಯೇ ಪ್ಯೂರ್ ಲಿಟಲ್ ಹಾರ್ಟ್ ಫೌಂಡೇಶನ್ ಲಾಂಚಿಂಗ್ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ಭಾಗಿ ಆಗಿದ್ದರು. ಇನ್ನು, ಸದ್ಯ ಪ್ಯೂರ್ ಲಿಟಲ್ ಹಾರ್ಟ್ ಫೌಂಡೇಶನ್ 125 ಮಕ್ಕಳ ಹಾರ್ಟ್ ಸರ್ಜರಿಗೆ ನೆರವಾಗಲಿದ್ದಾರಂತೆ. ಮಹೇಶ್, ''ಮಕ್ಕಳೆಂದರೆ ನನಗೆ ಯಾವಾಗಲೂ ಇಷ್ಟ. ಹೃದಯದ ಚಿಕಿತ್ಸೆ ಅಗತ್ಯ ಇರುವ ಮಕ್ಕಳಿಗೆ ನೆರವು ನೀಡುತ್ತಿರುವುದಕ್ಕೆ ನನಗೆ ಖುಷಿ ಇದೆ'', ಎಂದು ತಿಳಿಸಿದರು. ನಟ ಮಹೇಶ್ ಬಾಬು ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.