ಮುಂಬೈ: ತಮಿಳು ನಟ ಆರ್. ಮಾಧವನ್ಗೆ ಬಾಲಿವುಡ್ ಹೊಸದೇನಲ್ಲ. ಈ ಹಿಂದೆಯೂ ಕೆಲವು ಚಿತ್ರಗಳಲ್ಲಿ ನಟಿಸಿದ್ದರು. ಆದರೆ, 'ರಾಕೆಟ್ರಿ - ದಿ ನಂಬಿ ಎಫೆಕ್ಟ್' ಚಿತ್ರದ ನಂತರ ಮಾಧವನ್ಗೆ ಬಾಲಿವುಡ್ನಲ್ಲಿ ಆಫರ್ಗಳು ಹೆಚ್ಚಾಗುತ್ತಿವೆ. ಮಾಧವನ್ಗೆ ಬಾಲಿವುಡ್ನಿಂದ ಹಲವು ಆಫರ್ಗಳಿದ್ದು, ಈ ಪೈಕಿ ಅವರು ಅಕ್ಷಯ್ ಕುಮಾರ್ ಅಭಿನಯದ ಹೊಸ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.
ಬ್ರಿಟಿಷರ ವಿರುದ್ಧ ತೊಡೆ ತಟ್ಟಿದ ಸಿ. ಶಂಕರನ್ ನಾಯರ್ ಎಂಬ ಜನಪ್ರಿಯ ವಕೀಲರ ಕುರಿತು ಬಾಲಿವುಡ್ನಲ್ಲಿ ಬಯೋಪಿಕ್ ಆಗುತ್ತಿರುವ ಸುದ್ದಿ ಕೇಳಿರಬಹುದು. ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಿಸುತ್ತಿದ್ದು, ಶಂಕರನ್ ನಾಯರ್ ಅವರ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ಈಗಾಗಲೇ ಕಳೆದ ವರ್ಷವೇ ಚಿತ್ರೀಕರಣ ಪ್ರಾರಂಭವಾಗಿದ್ದು, ಹಲವು ಮಹತ್ವದ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ.
ಈಗ ಈ ತಂಡಕ್ಕೆ ಆರ್. ಮಾಧವನ್ ಅವರ ಸೇರ್ಪಡೆಯಾಗಿದೆ. ಈ ಚಿತ್ರದಲ್ಲಿ ಮಾಧವನ್ ಸಹ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರೀಕರಣದಲ್ಲೂ ಭಾಗವಹಿಸಿದ್ದಾರೆ. ಈ ಚಿತ್ರವನ್ನು ಜಲಯನ್ವಾಲಾ ಬಾಗ್ ಹತ್ಯಾಕಾಂಡದ ಕುರಿತು ಸುತ್ತಲಿದ್ದು, 20 ಮತ್ತು 30ರ ಕಾಲಘಟ್ಟದ ಚಿತ್ರವಾಗಿದೆ. ಈ ಹತ್ಯಾಕಾಂಡದ ವಿರುದ್ಧ ನ್ಯಾಯಾಲಯದಲ್ಲಿ ಶಂಕರನ್ ನಾಯರ್ ಅವರು ಹೋರಾಡಿ, ನ್ಯಾಯ ಕೊಡಿಸಿದ್ದರು. ಆ ಘಟನೆಯನ್ನಾಧರಿಸಿ, ರಘು ಪಲಟ್ ಮತ್ತು ಅವರ ಪತ್ನಿ ಪುಷ್ಪಾ ಪಲಟ್ ಬರೆದಿರುವ, 'ದಿ ಕೇಸ್ ದಟ್ ಶುಕ್ ದಿ ಬ್ರಿಟಿಷ್ ಎಂಪೈರ್' ಎಂಬ ಪುಸ್ತಕವನ್ನಾಧರಿಸಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ.
ಇದನ್ನೂ ಓದಿ: ‘ಕಡಲತೀರದ ಭಾರ್ಗವ’ ಚಿತ್ರದಿಂದ ಮಧುರವಾದ ಹಾಡು ಬಂತು …
ಸದ್ಯಕ್ಕೆ, 'ಶಂಕರನ್ ನಾಯರ್ ಬಯೋಪಿಕ್'' ಎಂದು ಕರೆಯಲ್ಪಡುತ್ತಿರುವ ಈ ಚಿತ್ರವನ್ನು ಕರಣ್ ಸಿಂಗ್ ತ್ಯಾಗಿ ನಿರ್ದೇಶನ ಮಾಡುತ್ತಿದ್ದು, ಅಕ್ಷಯ್ ಕುಮಾರ್, ಮಾಧವನ್ ಅಲ್ಲದೆ ಅನನ್ಯಾ ಪಾಂಡೆ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ದ್ವಿತೀಯ ಹಂತದ ಚಿತ್ರೀಕರಣ ಇದೀಗ ನಡೆಯುತ್ತಿದೆ. ಫೆಬ್ರವರಿ ಕೊನೆಯ ಹೊತ್ತಿಗೆ ಚಿತ್ರೀಕರಣ ಮುಗಿಯಲಿದೆ ಎಂದು ಹೇಳಲಾಗುತ್ತಿದೆ.