

ಬೆಂಗಳೂರು: ‘ಕಡಲತೀರದ ಭಾರ್ಗವ’ ಎಂಬ ಹೆಸರು ಕೇಳುತ್ತಿದ್ದಂತೆ, ಮನಸ್ಸಿಗೆ ಮೊದಲು ಬರುವ ಹೆಸರು ಶಿವರಾಮ ಕಾರಂತರದ್ದು. ಈಗ ಅದೇ ಹೆಸರಿನ ಚಿತ್ರವೊಂದು ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೆ ತಯಾರಾಗಿ, ಬಿಡುಗಡೆಗೆ ಸಿದ್ಧವಾಗಿದೆ. ಕರೊನಾಗೂ ಮುನ್ನ ಶುರುವಾದ ಈ ಚಿತ್ರ, ಇದೇ ವರ್ಷ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಮೊದಲ ಹಂತವಾಗಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
‘ಜೇಮ್ಸ್’ ಖ್ಯಾತಿಯ ಚೇತನ್ ಕುಮಾರ್ ರಚಿಸಿರುವ 'ಮಧುರ ಮಧುರ' ಎಂಬ ಹಾಡನ್ನು ಅನಿಲ್ ಸಿ.ಜೆ ಮತ್ತು ವಾರಿಜಾಶ್ರೀ ವೇಣುಗೋಪಾಲ್ ಹಾಡಿದ್ದಾರೆ. ಮಾಧುರ್ಯ ತುಂಬಿದ ಈ ಹಾಡನ್ನು ವಿಶೇಷವಾಗಿ ನಿರ್ಮಿಸಲಾಗಿರುವ ಸೆಟ್ನಲ್ಲಿ ಚಿತ್ರೀಕರಣ ಮಾಡುವುದರ ಜೊತೆಗೆ, ಕುಮಟದ ಸುಂದರ ಪರಿಸರದಲ್ಲಿ ಸೆರೆ ಹಿಡಿಯಲಾಗಿದೆ.
ಈಗಾಗಲೇ ಸೆನ್ಸಾರ್ ಮಂಡಳಿಯಿಂದ 'ಯು/ಎ' ಪ್ರಮಾಣ ಪತ್ರ ಪಡೆದು ಬಿಡುಗಡೆಗೆ ಸಜ್ಜಾಗುತ್ತಿರುವ ‘ಕಡಲ ತೀರದ ಭಾರ್ಗವ’ ಚಿತ್ರದ ಪ್ರಮೋಷನ್ ಇದೀಗ ಈ ಹಾಡಿನಿಂದ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ಮೂರು ಹಾಡುಗಳು ಮತ್ತು ಟ್ರೈಲರ್ ಬಿಡುಗಡೆಯಾಗಲಿದೆ.
‘ಕಡಲತೀರದ ಭಾರ್ಗವ’ ಚಿತ್ರದ ಹಿಂದೆ ಉತ್ಸಾಹಿ ಯುವಕರ ತಂಡವಿದ್ದು, ಈ ಚಿತ್ರವನ್ನು ಎವ ಕಲಾ ಸ್ಟುಡಿಯೋಸ್ನಡಿ ವರುಣ್ ರಾಜು ಮತ್ತು ಭರತ್ ಗೌಡ ಜಂಟಿಯಾಗಿ ನಿರ್ಮಿಸಿದ್ದಾರೆ. ಭರತ್ ಗೌಡ, 'ಬಿಗ್ ಬಾಸ್' ಖ್ಯಾತಿಯ ಶ್ರುತಿ ಪ್ರಕಾಶ್, ವರುಣ್ ರಾಜು, ರಾಘವ್ ನಾಗ್, ಕೆ.ಎಸ್. ಶ್ರೀಧರ್, ಅಶ್ವಿನ್ ಹಾಸನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಈ ಹಿಂದೆ ಜಗ್ಗೇಶ್ ಅಭಿನಯದ ‘8 ಎಂಎಂ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪನ್ನಗ ಸೋಮಶೇಖರ್, ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಅನಿಲ್ ಸಿಜಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದರೆ, ಕೀರ್ತನ್ ಪೂಜಾರಿ ಛಾಯಾಗ್ರಹಣ ಮಾಡಿದ್ದಾರೆ.