ಶಿವಮೊಗ್ಗ: ವಿನೋದ್ ಪ್ರಭಾಕರ್ ಅಭಿನಯದ 'ಮಾದೇವ' ಚಿತ್ರಕ್ಕೆ ಕೆಲವು ದಿನಗಳಿಂದ ಸತತ ಚಿತ್ರೀಕರಣವಾಗುತ್ತಿದೆ. ಸದ್ಯ ಶಿವಮೊಗ್ಗದಲ್ಲಿ ಚಿತ್ರತಂಡ ಬೀಡುಬಿಟ್ಟಿದ್ದು, ಅಲ್ಲಿ ಮಹತ್ವದ ಸನ್ನಿವೇಶಗಳನ್ನು ಚಿತ್ರೀಕರಣ ಮಾಡುತ್ತಿದೆ. ಈ ಮಧ್ಯೆ, ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ 'ಗಂಧದ ಗುಡಿ'ಯನ್ನು ಇಂದು ಇಡೀ ಚಿತ್ರತಂಡ ಒಟ್ಟಾಗಿ ಕೂತು ವೀಕ್ಷಿಸಲಿದೆ.
ಇಂದು ರಾತ್ರಿ 10ರ ನಂತರ ನಗರದ ಒಂದು ಮಲ್ಟಿಪ್ಲೆಕ್ಸ್ನಲ್ಲಿ ಇಡೀ ಚಿತ್ರತಂಡ ಒಟ್ಟಾಗಿ ಕೂತು 'ಗಂಧದ ಗುಡಿ' ಚಿತ್ರವನ್ನು ನೋಡುವ ಪ್ಲಾನ್ ಹಾಕಿಕೊಂಡಿದ್ದು, ಟಿಕೆಟ್ ಬುಕ್ ಮಾಡಲಾಗಿದೆಯಂತೆ. ಒಟ್ಟು 120 ಜನರು ಒಟ್ಟಿಗೆ ಈ ಸಿನಿಮಾ ನೋಡಲಿದ್ದಾರೆ ಎನ್ನುತ್ತಾರೆ ಚಿತ್ರದ ನಾಯಕ ವಿನೋದ್ ಪ್ರಭಾಕರ್.
ಈ ಕುರಿತು 'ವಿಜಯವಾಣಿ' ಜತೆಗೆ ಮಾತನಾಡಿದ ಅವರು, 'ಚಿತ್ರ ಬಿಡುಗಡೆಯಾದ ದಿನ ನಾವೆಲ್ಲ ಚಿತ್ರೀಕರಣದಲ್ಲಿದ್ದೆವು. ಈಗಲೂ ಸತತವಾಗಿ ಚಿತ್ರೀಕರಣ ನಡೆಯುತ್ತಿದೆ. ಇದರ ಮಧ್ಯೆ ಗ್ಯಾಪ್ ತೆಗೆದುಕೊಂಡು ಚಿತ್ರ ನೋಡುವುದಕ್ಕೆ ತೀರ್ಮಾನಿಸಿದ್ದೇವೆ. ಅದಕ್ಕಾಗಿ ಬುಕ್ ಸಹ ಮಾಡಲಾಗಿದೆ. ಪುನೀತ್ ನಮಗೆಲ್ಲರಿಗೂ ಸ್ಪೆಷಲ್ ಆದ ವ್ಯಕ್ತಿ. ಅವರ ನಟನೆಯ ಕೊನೆಯ ಚಿತ್ರ ಇದು. ಚಿತ್ರ ನೋಡಿ ಅದೆಷ್ಟು ಬಾರಿ ಎಮೋಷನಲ್ ಆಗುತ್ತೀನೋ ಗೊತ್ತಿಲ್ಲ' ಎನ್ನುತ್ತಾರೆ ವಿನೋದ್.
'ಮಾದೇವ' ಚಿತ್ರದಲ್ಲಿ ವಿನೋದ್ ಪ್ರಭಾಕರ್ಗೆ ನಾಯಕಿಯಾಗಿ ಸೋನಲ್ ಮೊಂತೆರೋ ನಟಿಸುತ್ತಿದ್ದು, ಜತೆಗೆ ಶ್ರುತಿ, ಶ್ರೀನಗರ ಕಿಟ್ಟಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಮುಂತಾದವರರು ನಟಿಸುತ್ತಿದ್ದಾರೆ. ಈ ಹಿಂದೆ, ಚಿರಂಜೀವಿ ಸರ್ಜಾ ಅಭಿನಯದ "ಖಾಕಿ' ಚಿತ್ರ ನಿರ್ದೇಶಿಸಿದ್ದ ನವೀಣ್ ರೆಡ್ಡಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಬೆಂಗಳೂರು, ಮದ್ದೂರು, ಶಿವಮೊಗ್ಗ, ಹೈದರಾಬಾದ್ ಮುಂತಾದ ಕಡೆ ನಡೆಯಲಿದೆ. ಗಾಯತ್ರಿ ಹಳಲೆ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪ್ರದ್ಯೋತನ್ ಸಂಗೀತವಿದೆ.