ಸಿನಿವಾಣಿ

ಕಾಂಡೋಮ್​ ಜಾಹೀರಾತಿನಂತಿದೆಯಾ ಟಾಕ್ಸಿಕ್​ ಟೀಸರ್?​! ಗೀತು ವಿರುದ್ಧ ಖ್ಯಾತ ನಿರ್ದೇಶಕ ಗರಂ ಆಗಿದ್ದೇಕೆ? Toxic

Toxic : ನಿನ್ನೆ (ಜ.08) ರಾಕಿಂಗ್​​ ಸ್ಟಾರ್​ ಯಶ್​ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅವರ ಬಹುನಿರೀಕ್ಷಿತ ಟಾಕ್ಸಿಕ್​ ಸಿನಿಮಾದ ಟೀಸರ್​ ಅನ್ನು ಬರ್ತಡೇ ಗಿಫ್ಟ್​ ಆಗಿ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್​ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ಇದೇ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.

ನಿನ್ನೆ ಬಿಡುಗಡೆಯಾದ ಟೀಸರ್​ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕೆಲವರಂತೂ ಟೀಸರ್​ ನೋಡಿ ತೀವ್ರ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.​ ಕಾಂಡೋಮ್ ಜಾಹೀರಾತಿನಂತಿದೆ ಎಂದು ಕೆಲವರು ಎಕ್ಸ್​ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮಲಯಾಳಂನ ಕಸಬಾ ಚಿತ್ರದ ನಿರ್ದೇಶಕ ನಿತಿನ್ ರೆಂಜಿ ಪಣಿಕರ್, ಟಾಕ್ಸಿಕ್​ ನಿರ್ದೇಶಕಿ ಗೀತು ಮೋಹನ್​ದಾಸ್​ ವಿರುದ್ಧ ಹರಿಹಾಯ್ದಿದ್ದಾರೆ.

ಗೀತಾ ಮೋಹನ್​ದಾಸ್​ ಅವರ ದ್ವಂದ್ವ ನಿಲುವನ್ನು ನಿತಿನ್​ ಬಯಲು ಮಾಡಿದ್ದಾರೆ. ಗೀತು ಅವರು ತಮ್ಮ ರಾಜ್ಯವನ್ನು ದಾಟಿ ಹೋದಾಗ ಅವರ ಸ್ತ್ರೀದ್ವೇಷದ ವ್ಯಾಖ್ಯಾನವೂ ಕೂಡ ಅನುಕೂಲಕ್ಕೆ ತಕ್ಕಂತೆ ಬದಲಾಗುತ್ತದೆ ಎಂದು ಕಿಡಿಕಾರಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಟಾಕ್ಸಿಕ್​ ಟೀಸರ್‌ನಲ್ಲಿ ನಾನು ನೋಡಿದ ದೃಶ್ಯಗಳಿಗೆ ನನ್ನ ಆಕ್ಷೇಪವಿಲ್ಲ. ವಿಚಿತ್ರ ಏನೆಂದರೆ, ಅದೇ ರೀತಿಯ ದೃಶ್ಯಗಳು ಬೇರೆ ಚಿತ್ರಗಳಲ್ಲಿ ಬಳಸಿದಾಗ ಈ ಚಿತ್ರದ ಹಿಂದಿರುವ ಜನರು ಆಕ್ರೋಶಗೊಳ್ಳುತ್ತಾರೆ. ಒಮ್ಮೆ ನನ್ನ ಚಿತ್ರದಲ್ಲಿ ಇಂತಹ ದೃಶ್ಯಗಳ ಬಗ್ಗೆ ಆಕ್ಷೇಪ ಎತ್ತಿದ್ದರು. ಸ್ತ್ರೀದ್ವೇಷ ಮತ್ತು ಮಹಿಳೆಯನ್ನು ಪುರುಷರ ಆಟದ ವಸ್ತುವಿನಂತೆ ತೋರಿಸಿದ್ದಾರೆ ಎಂದಿದ್ದರು. ಆದರೆ, ಇಂದು ಅದೇ ರೀತಿಯ ದೃಶ್ಯಗಳನ್ನು ತಮ್ಮ ಸಿನಿಮಾದಲ್ಲಿ ಚಿತ್ರೀಕರಿಸಿದ್ದಾರೆ. ತಮ್ಮ ರಾಜ್ಯದಲ್ಲಿದ್ದ ನಿಲುವು ಬೇರೆ ರಾಜ್ಯಕ್ಕೆ ಎಂಟ್ರಿ ಕೊಟ್ಟಾಗ ಬದಲಾಗುತ್ತದೆ. ಗೀತು ಅವರು ತಮ್ಮ ಅನುಕೂಲಕ್ಕಾಗಿ ಎಲ್ಲವನ್ನು ಬದಲಿಸಿಕೊಳ್ಳುತ್ತಾರೆಂದು ನಿತಿನ್​ ಟೀಕಿಸಿದ್ದಾರೆ.

ಅಂದಹಾಗೆ ನಿತಿನ್ ರಂಜಿ ಪಣಿಕ್ಕರ್ ಅವರ ಚೊಚ್ಚಲ ಚಿತ್ರ ಕಸಬಾದಲ್ಲಿ ಸ್ತ್ರೀದ್ವೇಷದ ದೃಶ್ಯಗಳಿವೆ ಎಂದು ನಟಿ ಪಾರ್ವತಿ ಥಿರುವೋತ್ ಟೀಕಿಸಿದ್ದರು. ನೇರವಾಗಿ ಚಿತ್ರದ ಹೆಸರನ್ನು ಉಲ್ಲೇಖಿಸದೇ ಧ್ವನಿ ಎತ್ತಿದ್ದರು. ಆದರೆ, ಚಲನಚಿತ್ರೋತ್ಸವದ ಮುಕ್ತ ವೇದಿಕೆಯಲ್ಲಿ ಗೀತು ಮೋಹನ್ ದಾಸ್ ಚಿತ್ರದ ಹೆಸರನ್ನು ಹೇಳಿ ನೇರವಾಗಿಯೇ ಕಸಬಾ ಸಿನಿಮಾ ವಿರುದ್ಧ ಮಾತನಾಡಿದ್ದರು. ಇದಾದ ಬಳಿಕ ಕೆಲವರು ಮಮ್ಮುಟ್ಟಿ ವಿರುದ್ಧ ವ್ಯಾಪಕ ಟೀಕೆಗಳನ್ನು ವ್ಯಕ್ತಪಡಿಸಿದರು. ಏಕೆಂದರೆ, ಕಸಬಾ ಚಿತ್ರದಲ್ಲಿ ಮುಮ್ಮಟ್ಟಿ ನಾಯಕರಾಗಿ ನಟಿಸಿದರು. ಕಸಬಾ ಚಿತ್ರದ ಬಗ್ಗೆ ಅಂದು ಗೀತು ಅವರು ನೀಡಿದ್ದ ಹೇಳಿಕೆಗಳೇ ಇದು ತಿರುಮಂತ್ರವಾಗಿದೆ.

ಅಂದಹಾಗೆ ಟಾಕ್ಸಿಕ್ ಸಿನಿಮಾದ​ ಟೀಸರ್​ ಮಿಶ್ರ ಪತ್ರಿಕ್ರಿಯೆ ಪಡೆದುಕೊಳ್ಳುತ್ತಿದ್ದರೂ ವೀಕ್ಷಣೆ ವಿಚಾರದಲ್ಲಿ ದಾಖಲೆ ಬರೆಯುತ್ತಿದೆ. ಈಗಾಗಲೇ 35 ಮಿಲಿಯನ್​ಗೂ ಅಧಿಕ ವೀಕ್ಷಣೆ ಕಂಡಿದೆ. ಯಶ್​ ಅಭಿಮಾನಿಗಳಂತೂ ಕುಣಿದು ಕುಪ್ಪಳಿಸಿದ್ದಾರೆ. ಈ ಸಿನಿಮಾವನ್ನು ಕೆವಿನ್​ ಪ್ರೊಡಕ್ಷನ್​ ನಿರ್ಮಾಣ ಮಾಡುತ್ತಿದ್ದು, ಇದೇ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ. (ಏಜೆನ್ಸೀಸ್​)