

Actor Vishal : ಇತ್ತೀಚೆಗೆ ಕಾಲಿವುಡ್ ನಟ ವಿಶಾಲ್ ಅವರು ಭಾರಿ ಸುದ್ದಿಯಲ್ಲಿದ್ದಾರೆ. ಅವರ ಆರೋಗ್ಯದ ವಿಚಾರ ತುಂಬಾನೇ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಕಳೆದ ಎರಡು ದಿನಗಳಿಂದ ವೈರಲ್ ಆಗುತ್ತಿರುವ ಅವರ ವಿಡಿಯೋ. ಮೊನ್ನೆಯಷ್ಟೇ ತಮ್ಮ ಬಹುನಿರೀಕ್ಷಿತ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ವಿಶಾಲ್ ಆಗಮಿಸಿದ್ದರು. ಈ ವೇಳೆ ವಿಶಾಲ್ ಸ್ಥಿತಿಯನ್ನು ಕಂಡು ಎಲ್ಲರೂ ಶಾಕ್ ಆದರು. ಏಕೆಂದರೆ, ವಿಶಾಲ್ಗೆ ನೇರವಾಗಿ ನಡೆಯಲು, ಸರಿಯಾಗಿ ಮಾತನಾಡಲು ಅಥವಾ ಮೈಕ್ ಅನ್ನು ಹಿಡಿದುಕೊಳ್ಳಲು ಸಹ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ವಿಶಾಲ್ಗೆ ಏನಾಯಿತು ಎಂಬ ಚರ್ಚೆ ಶುರುವಾಯಿತು.
ವಿಶಾಲ್ ಅವರು 12 ವರ್ಷಗಳ ಹಿಂದೆ ಮದಗಜರಾಜ ಎಂಬ ಚಿತ್ರದಲ್ಲಿ ನಟಿಸಿದ್ದರು. 2013ರ ಪೊಂಗಲ್ಗೆ ಈ ಚಿತ್ರ ಬಿಡುಗಡೆಯಾಗಬೇಕಿತ್ತು, ಆದರೆ ಕಾರಣಾಂತರಗಳಿಂದ ಅದು ಮುಂದೂಡಲ್ಪಟ್ಟಿತು. ಇದೀಗ 12 ವರ್ಷಗಳ ನಂತರ ಪೊಂಗಲ್ಗೆ ಚಿತ್ರ ತೆರೆಕಾಣುತ್ತಿದೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಸುಂದರ್ ಸಿ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ವರಲಕ್ಷ್ಮೀ ಶರತ್ಕುಮಾರ್, ಅಂಜಲಿ ಹಾಗೂ ಸಂತಾನಮ್ ಸೇರಿದಂತೆ ಪ್ರಮುಖ ಕಲಾವಿದರು ನಟಿಸಿದ್ದಾರೆ.
ಮೊನ್ನೆ ಚೆನ್ನೈನಲ್ಲಿ ಚಿತ್ರದ ಪತ್ರಿಕಾಗೋಷ್ಠಿ ಚೆನ್ನೈನಲ್ಲಿ ನಡೆಯಿತು. ಈ ವೇಳೆ ನಟ ವಿಶಾಲ್, ನಿರ್ದೇಶಕ ಸುಂದರ್ ಸಿ ಸೇರಿದಂತೆ ಅನೇಕ ಮಂದಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿಶಾಲ್ ಅವರು ಮೈಕ್ ಹಿಡಿಯಲು ಸಾಧ್ಯವಾಗದೆ ನಡುಗುವ ಕೈಗಳಿಂದಲೇ ತೊದಲುತ್ತಾ ಮಾತನಾಡಿದರು. ಅಲ್ಲದೆ, ಅವರ ದೇಹ ತುಂಬಾ ತೆಳ್ಳಗೆ ಕಾಣುತ್ತಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿ ಅಭಿಮಾನಿಗಳು ಶಾಕ್ ಆಗಿದ್ದರು ಮತ್ತು ವಿಶಾಲ್ಗೆ ಏನಾಗಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದರು.
ಇದರ ಬೆನ್ನಲ್ಲೇ ಚೆನ್ನೈನ ಅಪೋಲೋ ಆಸ್ಪತ್ರೆ ವಿಶಾಲ್ ಆರೋಗ್ಯದ ಬಗ್ಗೆ ವರದಿ ನೀಡಿತು. ಅದರ ಪ್ರಕಾರ ನಟ ವಿಶಾಲ್ಗೆ ವೈರಲ್ ಜ್ವರ ಇದೆ ಎಂದು ಗೊತ್ತಾಯಿತು. ಸೂಕ್ತ ಚಿಕಿತ್ಸೆ ಹಾಗೂ ಸಂಪೂರ್ಣ ವಿಶ್ರಾಂತಿಯನ್ನು ಪಡೆಯಲು ವೈದ್ಯಾಧಿಕಾರಿಗಳು ಸೂಚಿಸಿದ್ದಾರೆಂದು ತಿಳಿದುಬಂತು. ಇದರಿಂದ ಅಭಿಮಾನಿಗಳು ಸಹ ನಿಟ್ಟುಸಿರು ಬಿಟ್ಟರು. ಜ್ವರ ಎಂದು ಸ್ಪಷ್ಟನೆ ನೀಡಿದರೂ ಕೂಡ ಬೇರೆ ಯಾವುದೋ ಕಾಯಿಲೆಯಿಂದ ವಿಶಾಲ್ ಬಳಲುತ್ತಿದ್ದಾರೆ ಎಂಬ ವದಂತಿ ಕೂಡ ಹರಿದಾಡುತ್ತಿದೆ. ಇದರ ನಡುವೆ ತಮಿಳುನಾಡಿನ ಚಿತ್ರ ವಿಮರ್ಶಕ ಹಾಗೂ ಪತ್ರಕರ್ತ ಚಿಯಾರು ಬಾಲು ನೀಡಿರುವ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿವೆ.
ವಿಶಾಲ್ ಅವರು ಒತ್ತಡ ಮತ್ತು ಉದ್ವೇಗಕ್ಕೆ ಒಳಗಾಗಿ ಅದರಿಂದ ಹೊರ ಬರಲು ಸಾಕಷ್ಟು ಔಷಧಿಯನ್ನು ತೆಗೆದುಕೊಳ್ಳುತ್ತಿರಬಹುದು. ಈ ಹಿಂದೆ ವಿಶಾಲ್ನನ್ನು ಒಮ್ಮೆ ಭೇಟಿಯದಾಗ ಒತ್ತಡಕ್ಕೆ ಸಾಕಷ್ಟು ಔಷಧಿ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದರು. ಆದರೆ, ಆ ಸಮಯದಲ್ಲಿ ನಾನು ಅದನ್ನು ಗಟ್ಟಿಯಾಗಿ ಹೇಳಲಿಲ್ಲ. ಸಾಲಗಳು, ವಿಫಲವಾದ ಪ್ರೀತಿ, ಸ್ನೇಹಿತರಿಂದ ಮೋಸ ಮತ್ತು ಅವರ ಚಿತ್ರಗಳ ಸೋಲು ಅವರನ್ನು ಕಾಡುತ್ತಿರಬೇಕು. ಸ್ಟಾರ್ ಆದರೂ ವಿಶಾಲ್ ಕೂಡ ಮನುಷ್ಯರೇ ತಾನೆ. ತನ್ನ ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ವಿಶಾಲ್ ಅವರು ಸ್ಟಿರಾಯ್ಡ್ ಬಳಸುತ್ತಿರಬಹುದು ಎಂದು ಚಿಯಾರು ಬಾಲು ಅವರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಶಾಲ್ ಅವರು ನಿರ್ದೇಶಕ ಬಾಲ ನಿರ್ದೇಶನದ ಅವನ್ ಇವನ್ ಸಿನಿಮಾದಲ್ಲಿ ಓರೆಗಣ್ಣಿನ ವ್ಯಕ್ತಿಯಾಗಿ ನಟಿಸಿದ್ದಾರೆ. ಇದಕ್ಕಾಗಿ ವಿಶಾಲ್ ಅವರು ನಿರ್ದೇಶಕರ ಬಲವಂತದಿಂದ ಕಣ್ಣಿನ ಆಪರೇಷನ್ಗೆ ಒಳಗಾಗಿದ್ದರು. ಇದರ ನಂತರ ಕಣ್ಣಿನ ಸಮಸ್ಯೆಗಳು ಶುರುವಾಯಿತು. ದೃಷ್ಟಿಯು ಕೂಡ ಮಂಜಾಯಿತು. ಹೀಗಾಗಿ ವಿಶಾಲ್ ಅವರು ಹೆಚ್ಚಿನ ಶಕ್ತಿಯ ಕನ್ನಡಕವನ್ನು ಧರಿಸಲು ಶುರು ಮಾಡಿದರು. ವಿಶಾಲ್ ಕಣ್ಣುಗಳಿಂದ ಆಗಾಗ ನೀರು ಸುರಿಯುತ್ತದೆ. ಇದು ಖಂಡಿತ ಜ್ವರವಲ್ಲ. ಜ್ವರವಾಗಿದ್ದರೆ, ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ವೈದ್ಯರು ಖಂಡಿತ ಅನುಮತಿ ನೀಡುತ್ತಿರಲಿಲ್ಲ. ವಿಶಾಲ್ಗೆ ಬೇರೇನೋ ಸಮಸ್ಯೆ ಇದೆ. ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಚಿಯಾರು ಬಾಲು ಹೇಳಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ ವಿಶಾಲ್ ನಟನೆಯ ರತ್ನಂ ಸಿನಿಮಾ ಕೊನೆಯದಾಗಿ ಬಿಡುಗಡೆಯಾಯಿತು. ಮದಗಜರಾಜ ಸಿನಿಮಾ ಜನವರಿ 12ಕ್ಕೆ ತೆರೆಗೆ ಅಪ್ಪಳಿಸಲಿದೆ. ತುಪ್ಪರಿವಾಲನ್ 2 ಸಿನಿಮಾದಲ್ಲಿಯೂ ವಿಶಾಲ್ ನಟಿಸಲಿದ್ದಾರೆ. (ಏಜೆನ್ಸೀಸ್)