ಜಸ್​​ಪ್ರೀತ್ ಬುಮ್ರಾ​ ವಿಶ್ವ ಶ್ರೇಷ್ಠ ಬೌಲರ್ ಆದರೆ ಕೊಹ್ಲಿ...​ ಅಚ್ಚರಿ ಹೇಳಿಕೆ ನೀಡಿದ ಸ್ಯಾಮ್ ಕೊನ್‌ಸ್ಟಾಸ್! Sam Konstas

Sam Konstas
Published on

Sam Konstas : ಆಸ್ಟ್ರೇಲಿಯಾದ ಯುವ ಆಟಗಾರ ಸ್ಯಾಮ್ ಕೊನ್‌ಸ್ಟಾಸ್ ಚೊಚ್ಚಲ ಪಂದ್ಯದಲ್ಲೇ ಭರ್ಜರಿ ಅರ್ಧಶತಕ ಸಿಡಿಸಿದರು. ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂಗವಾಗಿ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದ ಕೊನ್​ಸ್ಟಾಸ್​ 60 ರನ್ ಗಳಿಸಿ ವಿಶ್ವ ಕ್ರಿಕೆಟ್​ನ ಗಮನ ಸೆಳೆದರು.

ಸ್ಯಾಮ್​ ಕೊನ್​ಸ್ಟಾಸ್, ಸಿಡ್ನಿ ಟೆಸ್ಟ್​ನಲ್ಲೂ ಉತ್ತಮ ಪ್ರದರ್ಶನ ನೀಡಿದರು. ಎರಡೂ ಇನ್ನಿಂಗ್ಸ್‌ಗಳಲ್ಲಿ 45 ರನ್​ ಗಳಿಸಿದರು. ಭಾರತ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕೊನ್‌ಸ್ಟಾಸ್, ಟೀಮ್​ ಇಂಡಿಯಾದ ಹಂಗಾಮಿ ನಾಯಕ ಜಸ್​ಪ್ರೀತ್​ ಬುಮ್ರಾ ಅವರೊಂದಿಗೆ ವಾಗ್ವಾದಕ್ಕಿಳಿದರು. ಸಿಡ್ನಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್​ ಇಂಡಿಯಾ ಮೊದಲ ದಿನದಾಟದಲ್ಲಿ 185 ರನ್‌ಗಳಿಗೆ ಆಲೌಟ್ ಆಯಿತು. ಅದೇ ದಿನ ಆಸ್ಟ್ರೇಲಿಯಾ ಬ್ಯಾಟಿಂಗ್ ಆರಂಭಿಸಿತು. ಬುಮ್ರಾ ಬೌಲಿಂಗ್ ದಾಳಿ ಆರಂಭಿಸಿದರು. ಮೊದಲ ದಿನದಾಟದ ಕೊನೆಯ ಎಸೆತವನ್ನು ಉಸ್ಮಾನ್​ ಖವಾಜ ಎದುರಿಸಿದರು. ಬುಮ್ರಾ ಬೌಲಿಂಗ್ ಮಾಡುವಾಗ ಖವಾಜ ಸ್ವಲ್ಪ ಸಮಯ ಕೇಳಿದರು. ಇದರಿಂದ ಬುಮ್ರಾ ತುಂಬಾ ಕೋಪಗೊಂಡರು. ಈ ವೇಳೆ ನಾನ್‌ಸ್ಟ್ರೈಕರ್‌ ತುದಿಯಲ್ಲಿದ್ದ ಕೊನ್‌ಸ್ಟಾಸ್, ಬುಮ್ರಾ ಜೊತೆ ವಾಗ್ವಾದಕ್ಕಿಳಿದರು. ಇದಕ್ಕೆ ಬುಮ್ರಾ ಕೂಡ ಖಾರವಾಗಿ ಪ್ರತಿಕ್ರಿಯಿಸಿದಾಗ ಅಂಪೈರ್ ಮಧ್ಯ ಪ್ರವೇಶಿಸಿ ಜಗಳಕ್ಕೆ ಬ್ರೇಕ್​ ಹಾಕಿದರು. ಆದರೆ ಕೊನೆಯ ಎಸೆತದಲ್ಲಿ ಬುಮ್ರಾ, ಖವಾಜಾ ವಿಕೆಟ್ ಪಡೆದರು ಮತ್ತು ಕೊನ್​ಸ್ಟಾಸ್​ ಕಡೆ ನೋಡಿ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಎಲ್ಲ ಭಾರತೀಯ ತಂಡದ ಆಟಗಾರರು ಸಹ ಕೊನ್​ಸ್ಟಾಸ್​ರನ್ನು ಸುತ್ತುವರೆದರು. ಈ ಘಟನೆಯ ಬಗ್ಗೆ ಇತ್ತೀಚೆಗೆ ಕೋನ್​​ಸ್ಟಾಸ್​ ಪ್ರತಿಕ್ರಿಯಿಸಿದ್ದಾರೆ.

ನಾನು ನನ್ನ ಎದುರಾಳಿಗಳೊಂದಿಗೆ ಸ್ಪರ್ಧಿಸಲು ಇಷ್ಟಪಡುತ್ತೇನೆ. ಆದರೆ, ಟೀಮ್​ ಇಂಡಿಯಾ ಜೊತೆಗಿನ ಸರಣಿ ನನಗೆ ಹಲವು ವಿಷಯಗಳನ್ನು ಕಲಿಸಿದೆ. ವಾಸ್ತವವಾಗಿ, ಆ ದಿನ ನಾನು ಬುಮ್ರಾ ಅವರ ಸಮಯವನ್ನು ವ್ಯರ್ಥ ಮಾಡಲು ಪ್ರಯತ್ನಿಸಿದೆ. ಟೀಮ್​ ಇಂಡಿಯಾಗೆ ಬೌಲಿಂಗ್ ಮಾಡಲು ಮತ್ತೊಂದು ಅವಕಾಶ ನೀಡಲು ನಾನು ಬಯಸಲಿಲ್ಲ. ಆದರೆ, ಕೊನೆಗೂ ಟೀಮ್​ ಇಂಡಿಯಾ ಮೇಲುಗೈ ಸಾಧಿಸಿತು. ಬುಮ್ರಾ ಅವರು ವಿಶ್ವ ದರ್ಜೆಯ ಬೌಲರ್. ಈ ಸರಣಿಯಲ್ಲಿ ಅವರು 32 ವಿಕೆಟ್‌ಗಳನ್ನು ಪಡೆದಿದ್ದಾರೆ ಎಂದು ಬುಮ್ರಾ ಅವರ ಬೌಲಿಂಗ್​ ಕೌಶಲ್ಯವನ್ನು ಕೊನ್​ಸ್ಟಾಸ್​ ಶ್ಲಾಘಿಸಿದರು. ಅದೇ ರೀತಿ, ಮೆಲ್ಬೋರ್ನ್ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿಯೊಂದಿಗೆ ನಡೆದ ವಾಗ್ವಾದದ ಬಗ್ಗೆ ಕೇಳಿದಾಗ, ನಾನು ಪಂದ್ಯದ ನಂತರ ಕೊಹ್ಲಿಯೊಂದಿಗೆ ಮಾತನಾಡಿದ್ದೇನೆ. ಅವರೇ ನನ್ನ ರೋಲ್ ಮಾಡೆಲ್ ಎಂದು ಹೇಳಿದ್ದೆ. ನನ್ನ ಆರಾಧ್ಯ ಕ್ರಿಕೆಟಿಗನ ಎದುರು ಆಡುವುದು ನಿಜವಾದ ಗೌರವ. ಅವರು ತುಂಬಾ ವಿನಮ್ರರು. ಒಳ್ಳೆಯ ವ್ಯಕ್ತಿ. ಅವರು ನನಗೆ ಶುಭ ಹಾರೈಸಿದರು ಎಂದು ಸ್ಯಾಮ್ ಕೊನ್​ಸ್ಟಾಸ್​ ಹೇಳಿದರು.

ಅಂದಹಾಗೆ ಕೊನ್​ಸ್ಟಾಸ್ ಅವರು​ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ ಬಲಗೈ ಬ್ಯಾಟ್ಸ್‌ಮನ್‌. ಇವರನ್ನು ಜೂನಿಯರ್ ರಿಕಿ ಪಾಂಟಿಂಗ್ ಎಂದು ಕರೆಯಲಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net