

Boiled Egg : ಬೇಯಿಸಿದ ಮೊಟ್ಟೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ವೈದ್ಯರು ಸಾಮಾನ್ಯವಾಗಿ ಹೇಳುತ್ತಾರೆ. ಹೀಗಾಗಿ ಮೊಟ್ಟೆಯು ಅನೇಕ ಜನರ ನೆಚ್ಚಿನ ಆಹಾರವಾಗಿದೆ. ಕೇವಲ ರುಚಿ ಮಾತ್ರವಲ್ಲ, ಮೊಟ್ಟೆಯಲ್ಲಿ ಸಾಕಷ್ಟು ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳಿವೆ. ತೂಕ ನಷ್ಟ ಹಾಗೂ ಸ್ನಾಯುಗಳ ಬೆಳವಣಿಗೆಗೆ ಇದು ಸಹಾಯ ಮಾಡುತ್ತದೆ. ಅಲ್ಲದೆ, ಮೆದುಳಿನ ಆರೋಗ್ಯವನ್ನು ಸಹ ಸುಧಾರಿಸುತ್ತದೆ. ಮೊಟ್ಟೆಯ ವೈಶಿಷ್ಟ್ಯವೆಂದರೆ ಇವುಗಳನ್ನು ತುಂಬಾ ಸುಲಭವಾಗಿ ಬೇಯಿಸಬಹುದು.
ಮೊಟ್ಟೆಯನ್ನು ಬೇಯಿಸಿದ ಬಳಿಕ ಅದರ ಚಿಪ್ಪನ್ನು ತೆಗೆಯುವುದು ಅನೇಕರಿಗೆ ಕಷ್ಟದ ಕೆಲಸ. ಕೆಲವೊಮ್ಮೆ ಮೊಟ್ಟೆ ಚಿಪ್ಪು ಸುಲಭವಾಗಿ ಬಿಡಿಸಿಕೊಳ್ಳುತ್ತದೆ. ಆದರೆ, ಕೆಲವೊಮ್ಮೆ ಚಿಪ್ಪನ್ನು ಬಿಡಿಸುವಾಗ ಮೊಟ್ಟೆಯ ಬಿಳಿಭಾಗವು ಕೂಡ ಚಿಪ್ಪಿನೊಂದಿಗೆ ಅಂಟಿಕೊಂಡು ಬರುತ್ತದೆ. ಈ ಸಮಸ್ಯೆಯಿಲ್ಲದೇ ನೀವು ಮೊಟ್ಟೆ ಚಿಪ್ಪನ್ನು ಸುಲಭವಾಗಿ ಬಿಡಿಸಬಹುದು. ಅದನ್ನು ಮಾಡಲು ಕೆಲವು ಮಾರ್ಗಗಳಿವೆ. ಅವು ಯಾವುವು ಎಂಬುದನ್ನು ನಾವೀಗ ತಿಳಿಯೋಣ.
ಸಾಮಾನ್ಯವಾಗಿ, ಮೊಟ್ಟೆಗಳನ್ನು ಉಪ್ಪುಸಹಿತ ನೀರಿನಲ್ಲಿ ಕುದಿಸಲಾಗುತ್ತದೆ. ಆದಾಗ್ಯೂ, ಇದನ್ನು ಮಾಡುವ ಬದಲು, ನೀವು ಇಡ್ಲಿ ಬಾಣಲೆಯಲ್ಲಿ ಮೊಟ್ಟೆಗಳನ್ನು ಸ್ಟೀಮ್ ಮಾಡಬಹುದು. ಮೊಟ್ಟೆಗಳನ್ನು ಆವಿಯಲ್ಲಿ ಬೇಯಿಸುವುದರಿಂದ ಚಿಪ್ಪುಗಳು ಹೆಚ್ಚು ವೇಗವಾಗಿ ಮೃದುವಾಗಲು ಸಹಾಯ ಮಾಡುತ್ತದೆ. ಇದರಿಂದ ಚಿಪ್ಪನ್ನು ಸುಲಭವಾಗಿ ಬಿಡಿಸಬಹುದು. ಇದಿಷ್ಟೇ ಅಲ್ಲದೆ, ನೀವು ಮೊಟ್ಟೆಗಳನ್ನು ನೀರಿನಲ್ಲಿ ಕುದಿಸಿದ ತಕ್ಷಣ ತಣ್ಣನೆಯ ನೀರಿನಲ್ಲಿ ಹಾಕಬಹುದು. ಈ ರೀತಿ ಮಾಡುವುದರಿಂದಲೂ ಮೊಟ್ಟೆಯ ಚಿಪ್ಪು ಸುಲಭವಾಗಿ ಬರುತ್ತದೆ.
ಮೊಟ್ಟೆಯ ಚಿಪ್ಪನ್ನು ತೆಗೆಯುವಾಗ ನೀವು ಬಹಳ ಎಚ್ಚರಿಕೆಯಿಂದ ಮತ್ತು ನಿಧಾನವಾಗಿ ತೆಗೆಯಬೇಕು. ಕೆಲವೊಮ್ಮೆ, ನೀವು ನೀರಿನಲ್ಲಿ ಮೊಟ್ಟೆಗಳನ್ನು ಕುದಿಸಿದಾಗ, ಅವು ಬಿರುಕು ಬಿಡುತ್ತವೆ. ಇದನ್ನು ತಪ್ಪಿಸಲು, ನೀವು ಮೊಟ್ಟೆಗಳನ್ನು ಕುದಿಸುವ ನೀರಿಗೆ ಸ್ವಲ್ಪ ಕಲ್ಲು ಉಪ್ಪನ್ನು ಸೇರಿಸುವುದು ಅತ್ಯಗತ್ಯ.
ಅಂದಹಾಗೆ ಮೊಟ್ಟೆಯ ಚಿಪ್ಪುಗಳು ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ. ನಾವು ಮೊಟ್ಟೆಗಳನ್ನು ನೀರಿನಲ್ಲಿ ಕುದಿಸಿದಾಗ, ಚಿಪ್ಪಿನಲ್ಲಿರುವ ಕ್ಯಾಲ್ಸಿಯಂ ನೀರಿನಲ್ಲಿ ಕರಗುತ್ತದೆ. ಕ್ಯಾಲ್ಸಿಯಂ ಮಾತ್ರವಲ್ಲ, ಇನ್ನಿತರ ಕೆಲವು ಸಂಯುಕ್ತಗಳು ಸಹ ಬೆರೆಯುತ್ತವೆ. ಮೊಟ್ಟೆಯ ಚಿಪ್ಪು 95 ಪ್ರತಿಶತ ಕ್ಯಾಲ್ಸಿಯಂ ಕಾರ್ಬೋನೇಟ್‌ನಿಂದ ಮಾಡಲ್ಪಟ್ಟಿದೆ. ಉಳಿದ ಪ್ರಮಾಣಗಳು ರಂಜಕ, ಮೆಗ್ನೀಸಿಯಮ್, ಸೋಡಿಯಂ, ಪೊಟ್ಯಾಸಿಯಮ್, ಸತು, ಮ್ಯಾಂಗನೀಸ್, ಕಬ್ಬಿಣ ಮತ್ತು ತಾಮ್ರದಂತಹ ಅಂಶಗಳಾಗಿವೆ. ಮೊಟ್ಟೆಯನ್ನು ಕುದಿಸಿದಾಗ, ಈ ಎಲ್ಲ ಅಂಶಗಳು ನೀರಿನಲ್ಲಿ ಸೇರಿಕೊಳ್ಳುತ್ತವೆ. ಆಗ ಸಾಮಾನ್ಯ ನೀರು ಕೂಡ ಮಿನರಲ್ ವಾಟರ್ನಂತೆ ಆಗುತ್ತದೆ. ಈ ನೀರನ್ನು ಗಿಡಗಳಿಗೆ ಬಳಸಬಹುದು. ಮೊಟ್ಟೆಯನ್ನು ಕುದಿಸಿದ ನೀರು ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಪೋಷಣೆಯನ್ನು ಒದಗಿಸಲು ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತದೆ.
ಸಾಂದರ್ಭಿಕವಾಗಿ ಸಸ್ಯಗಳಿಗೆ ಮೊಟ್ಟೆಯ ಚಿಪ್ಪುಗಳನ್ನು ಸೇರಿಸುವುದು ಕೂಡ ಇದೇ ಕಾರಣಕ್ಕೆ. ಮೊಟ್ಟೆಯ ಚಿಪ್ಪುಗಳು ಕೂಡ ಗೊಬ್ಬರವಾಗಿ ಕೆಲಸ ಮಾಡುತ್ತದೆ. ಆದಾಗ್ಯೂ, ಚಿಪ್ಪುಗಳನ್ನು ನೇರವಾಗಿ ಸೇರಿಸುವ ಬದಲು, ಸಸ್ಯಗಳ ಬೇರುಗಳಿಗೆ ಮೊಟ್ಟೆಗಳನ್ನು ಕುದಿಸಿದ ನೀರನ್ನು ಸುರಿದರೆ ಪೋಷಕಾಂಶಗಳನ್ನು ವೇಗವಾಗಿ ಹೀರಿಕೊಳ್ಳುತ್ತವೆ. ಅದೇ ಸಮಯದಲ್ಲಿ, ನೀರು ಬಿಸಿಯಾಗಿರುವಾಗ ಯಾವುದೇ ಕಾರಣಕ್ಕೂ ಸುರಿಯಬಾರದು. ಮೊಟ್ಟೆಗಳನ್ನು ಕುದಿಸಿದ ನೀರು ತಣ್ಣಗಾದ ನಂತರ ಸಸ್ಯಗಳ ಮೇಲೆ ಸುರಿಯ ಬೇಕು. ಮನೆಯಲ್ಲಿ ಸಸ್ಯಗಳನ್ನು ನೆಡುವಾಗ ಅಥವಾ ಬೀಜಗಳನ್ನು ಬಿತ್ತುವಾಗ ಮೊಟ್ಟೆಗಳನ್ನು ಕುದಿಸಿದ ಈ ನೀರನ್ನು ನೀವು ಬಳಸಬಹುದು.
ಮೊಟ್ಟೆಯ ಚಿಪ್ಪುಗಳನ್ನು ಸಹ ಒಣಗಿಸಿ ಮಣ್ಣಿನೊಂದಿಗೆ ಬೆರೆಸಿದರೆ, ಮಣ್ಣು ಹೆಚ್ಚು ಫಲವತ್ತಾಗುತ್ತದೆ. ಅನೇಕ ಜನರು ಇದನ್ನು ಮಾಡುತ್ತಾರೆ. ಬೇಯಿಸಿದ ಮೊಟ್ಟೆಯ ನೀರು ಟೊಮ್ಯಾಟೋ ಸಸ್ಯಗಳಿಗೆ ಉತ್ತಮ ಪೋಷಣೆಯನ್ನು ನೀಡುತ್ತದೆ. ಹೆಚ್ಚು ಸೂರ್ಯನ ಬೆಳಕು ಬೀಳದ ಸಸ್ಯಗಳಿಗೂ ಮೊಟ್ಟೆಯ ನೀರನ್ನು ಬಳಸಬಹುದು. ಈ ನೀರನ್ನು ಮೆಣಸಿನಕಾಯಿ ಮತ್ತು ಬದನೆ ಗಿಡಗಳಿಗೂ ಸುರಿಯಬಹುದು. ಹೂವಿನ ಗಿಡಗಳಿಗೆ ಮೊಟ್ಟೆಯ ನೀರನ್ನು ಸುರಿದರೆ ಕೀಟಗಳ ವಿರುದ್ಧ ಹೋರಾಡುವ ಶಕ್ತಿ ಗಿಡಗಳಿಗೆ ಸಿಗುತ್ತದೆ. ಹೀಗಾಗಿ ಮೊಟ್ಟೆಯ ನೀರನ್ನು ವೇಸ್ಟ್ ಮಾಡದೇ ಈ ರೀತಿ ಬಳಸಬಹುದು. (ಏಜೆನ್ಸೀಸ್)