ಸಿನಿವಾಣಿ

ಸಹೋದರರ ಸವಾಲ್​ ; "ಕಾಲಾಯ ನಮಃ' ಚಿತ್ರದಲ್ಲಿ ಜಗ್ಗೇಶ್​, ಕೋಮಲ್​ ನಟನೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಗೋವಿಂದ ಗೋಪಾಲ', "ಕಾಸು ಇದ್ದೋನೆ ಬಾಸು' ಸೇರಿ ಕೆಲವು ಚಿತ್ರಗಳಲ್ಲಿ ಜಗ್ಗೇಶ್​ ಮತ್ತು ಕೋಮಲ್​ ಕುಮಾರ್​ ಸಹೋದರರು ಒಟ್ಟಿಗೆ ನಟಿಸಿದ್ದಾರೆ. ಇದೀಗ ಕೆಲ ವರ್ಷಗಳ ಕಾಲ ಬ್ರೇಕ್​ ಪಡೆದಿದ್ದ ಕೋಮಲ್​, "ಉಂಡೆನಾಮ' ಮತ್ತು "ನಮೋ ಭೂತಾತ್ಮ 2' ಚಿತ್ರಗಳ ಮೂಲಕ ವಾಪಸ್ಸಾಗಿದ್ದಾರೆ. "ಕಾಲಾಯ ನಮಃ' ಎಂಬ ಚಿತ್ರವನ್ನು ತಮ್ಮ ಬ್ಯಾನರ್​ನಲ್ಲಿಯೇ ನಿರ್ಮಿಸುತ್ತಿದ್ದಾರೆ. ಇದೀಗ ಈ ಚಿತ್ರದಲ್ಲಿ ಕೋಮಲ್​ ಜತೆ ಜಗ್ಗೇಶ್​ ಕೂಡ ಅಭಿನಯಿಸುತ್ತಿದ್ದು, ಇತ್ತೀಚೆಗಷ್ಟೆ ಜಾಲಿವುಡ್​ ಸ್ಟುಡಿಯೋಸ್​ನಲ್ಲಿ ಸಹೋದರರ ಭಾಗದ ಶೂಟಿಂಗ್​ ನಡೆಸಲಾಯಿತು.

ನಟ ಜಗ್ಗೇಶ್​, "ಕೋಮಲ್​ ಅದ್ಭುತ ಕಲಾವಿದ. ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾನು, ಕೋಮಲ್​ ಮತ್ತು ನನ್ನ ಮಗ ಯತಿರಾಜ್​ ಮೂರೂ ಜನ ನಟಿಸುತ್ತಿದ್ದೇವೆ. ಇತ್ತೀಚೆಗೆ ಬರುತ್ತಿರುವ ಅನೇಕ ಚಿತ್ರಗಳು ಯಶಸ್ವಿಯಾಗುತ್ತಿವೆ. "ಕಾಲಾಯ ನಮಃ' ಕೂಡ ಅದೇ ಸಾಲಿಗೆ ಸೇರಲಿ' ಎಂದು ಶುಭಹಾರೈಸಿದರು. ಕೋಮಲ್​, "ಈಗ ಹಾಡಿನ ಶೂಟಿಂಗ್​ ನಡೆಯುತ್ತಿದ್ದು ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದೆ. ಅಂದುಕೊಂಡಂತೆ ಆದರೆ ಅಕ್ಟೋಬರ್​ ಅಥವಾ ನವೆಂಬರ್​ಗೆ ರಿಲೀಸ್​' ಎಂದು ಮಾಹಿತಿ ನೀಡಿದರು.

ಮತಿವಣ್ಣನ್​ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದು, "ಟೈಟಲ್​ ಹೇಳುವಂತೆ ಇದು ಸಮಯದ ಸುತ್ತ ನಡೆಯುವ ಕಥೆ' ಎಂದು ಹೇಳಿಕೊಂಡರು. ಕೋಮಲ್​ಗೆ ಆಸಿಯಾ ಫಿದೋರ್ಸ್​ ನಾಯಕಿಯಾಗಿದ್ದು, ಜಗ್ಗೇಶ್​ ಜತೆ ಪ್ರಕಾಶ್​ ರಾಜ್​, ಸುಚೇಂದ್ರ ಪ್ರಸಾದ್​, ಶೈನ್​ ಶೆಟ್ಟಿ ಪ್ರಮುಖ ತಾರಾಗಣದಲ್ಲಿದ್ದಾರೆ.