ಸಿನಿವಾಣಿ

ಬಿಗ್​ ಬಿ ಮೊಮ್ಮಗಳ ಜತೆಗೆ ಡೇಟಿಂಗ್​ ಮಾಡುತ್ತಿದ್ದಾರಾ ಸಿದ್ಧಾಂತ್​ ಚತುರ್ವೇದಿ?

ಮುಂಬೈ: ಹೇಳಿಕೊಳ್ಳೋಕೆ ಒಂದೇ ಒಂದು ಚಿತ್ರದಲ್ಲೂ ಬಣ್ಣ ಹಚ್ಚಿಲ್ಲ ಬಿಗ್​ ಬಿ ಮೊಮ್ಮಗಳಾದ ನವ್ಯಾ ನವೇಲಿ ನಂದಾ. ಆದರೆ, ಈಗಾಗಲೇ ಬೇರೆಬೇರೆ ಕಾರಣಗಳಿಗೆ ಸಾಕಷ್ಟು ಸುದ್ದಿಯಾಗಿದ್ದಾರೆ. ಈಗ ಅವರು ಇನ್ನೊಂದು ವಿಷಯವಾಗಿ ಸುದ್ದಿಯಲ್ಲಿದ್ದಾರೆ.

ಸಿದ್ಧಾಂತ್​ ಗೊತ್ತಲ್ಲ? ಅದೇ 'ಗೆಹ್ರಾಯಿಯಾಂ' ಚಿತ್ರದಲ್ಲಿ ನಟಿಸಿದ್ದ ಸಿದ್ಧಾಂತ್​ ಚತುರ್ವೇದಿ? ಆತನ ಜತೆಗೆ ಇದೀಗ ನವ್ಯಾ ಹೆಸರು ಕೇಳಿಬರುತ್ತಿದೆ. ಇಬ್ಬರೂ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್​ನಲ್ಲಿ ಬಲವಾಗಿ ಹಬ್ಬಿದೆ. ಇದು ಸುಳ್ಳು ಅಂತ ಹೇಳುವ ಹಾಗಿಲ್ಲ. ಇಬ್ಬರೂ ತರುಣರು. ಎಲ್ಲೋ ಪರಿಚಯವಾಗಿ, ಅದು ಸ್ನೇಹವಾಗಿ, ಅಲ್ಲಿಂದ ಇಬ್ಬರ ಮನಸ್ಸುಗಳು ಬೆಸೆದಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಆದರೆ, ಈ ಸುದ್ದಿ ಸುಳ್ಳು ಎಂದು ಸ್ವತಃ ಸಿದ್ಧಾಂತ್​ ಹೇಳಿಕೊಂಡಿದ್ದಾರೆ. ಸುದ್ದಿ ನಿಜವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರಿಗೆ ಈ ಅಂತೆ-ಕಂತೆಯ ಕುರಿತು ಕೇಳಲಾಗಿದೆ. ಏನು ನಡೆಯುತ್ತಿದೆ ನಿಮ್ಮ ಮತ್ತು ನವ್ಯಾ ನಡುವೆ ಎಂದು ಪ್ರಶ್ನಿಸಿದಾಗ, 'ಏನಾದರೂ ಆಗಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಏನೂ ಆಗಿಲ್ಲ. ನಾನು ಯಾರನ್ನೋ ಪ್ರೀತಿಸುತ್ತಿದ್ದೇನೆ, ಡೇಟಿಂಗ್​ ಮಾಡುತ್ತಿದ್ದೇನೆ ಎಂಬಂತಹ ವಿಷಯಗಳೆಲ್ಲ ನಿಜವಾಗಿದ್ದರೆ ಚೆನ್ನಾಗಿರುತ್ತಿತ್ತು. ಆದರೆ, ಅದಕ್ಕೆ ನನಗೆ ಸಮಯವೇ ಇಲ್ಲ. ನನ್ನ ಧ್ಯಾನವೆಲ್ಲ ಸಿನಿಮಾ ಕಡೆಗಿದೆ' ಎಂದು ಹೇಳಿದ್ದಾರೆ.

ಅಂದಹಾಗೆ, 'ಫೋನ್​ ಬೂತ್​' ಎಂಬ ಚಿತ್ರದಲ್ಲಿ ಸಿದ್ಧಾಂತ್​ ನಟಿಸಿದ್ದು, ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ.