ಮುಂಬೈ: 12 ವರ್ಷಗಳ ಹಿಂದೆ ಬಿಡುಗಡೆಯಾದ 'ಜಾನೆ ತೂ ಯಾ ಜಾನೆ ನಾ' ಎಂಬ ಚಿತ್ರದ ಮೂಲಕ ಬಾಲಿವುಡ್ಗೆ ನಟರಾಗಿ ಎಂಟ್ರಿ ಕೊಟ್ಟವರು ಆಮೀರ್ ಖಾನ್ ಸಂಬಂಧಿ ಇಮ್ರಾನ್ ಖಾನ್. ಮೊದಲ ಚಿತ್ರ ಹಿಟ್ ಆದಮೇಲೆ, ಇಮ್ರಾನ್ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದರು. ಈಗ ಅವರು ನಟನೆಗೆ ಗುಡ್ಬೈ ಹೇಳಿದ್ದಾರೆ ಎಂದು ಅವರ ಆಪ್ತಮಿತ್ರ ಹಾಗೂ ನಟ ಅಕ್ಷಯ್ ಒಬೆರಾಯ್ ಹೇಳಿದ್ದಾರೆ.
ಇದನ್ನೂ ಓದಿ: ರಾಜನಿವಾಸದಲ್ಲಿ ಕೃತಿಕಾ – ಮತ್ತೆ ಬಂದ ಕಿರುತೆರೆಯ ರಾಧಾ
'ಗುರುಗಾಂವ್' ಮತ್ತು 'ಕಲಾಕಂಡಿ' ಮುಂತಾದ ಚಿತ್ರಗಳಲ್ಲಿ ನಟಿಸಿರುವ ಅಕ್ಷಯ್ ಒಬೆರಾಯ್ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಈ ಸಂದರ್ಭದಲ್ಲಿ, ಇಮ್ರಾನ್ ಇನ್ನು ಮುಂದೆ ನಟಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, 'ಬಾಲಿವುಡ್ನಲ್ಲಿ ನನ್ನ ಬೆಸ್ಟ್ ಫ್ರೆಂಡ್ ಎಂದರೆ ಅದು ಇಮ್ರಾನ್ ಖಾನ್. ಸಮಸ್ಯೆ ಇದ್ದರೆ ಬೆಳಿಗ್ಗೆ ನಾಲ್ಕು ಗಂಟೆಗೆ ಬೇಕಾದರೂ ಎಬ್ಬಿಸಿ ಅವನಿಂದ ಸ್ನೇಹ ಪಡೆಯುವಷ್ಟು ಸ್ವಾತಂತ್ರ್ಯವನ್ನು ಅವನು ನನಗೆ ಕೊಟ್ಟಿದ್ದಾನೆ. ಕಳೆದ 18 ವರ್ಷಗಳಿಂದ ಅವನು ನಗೆ ಗೊತ್ತು. ಅಂಧೇರಿ ವೆಸ್ಟ್ನಲ್ಲಿರುವ ಕಿಶೋರ್ ಆಕ್ಟಿಂಗ್ ಸ್ಕೂಲ್ನಲ್ಲಿ ನಾವಿಬ್ಬರೂ ಒಟ್ಟಿಗೆ ಕಲಿತು ಬಂದವರು ನಾವು' ಎಂದು ಅಕ್ಷಯ್ ಹೇಳಿಕೊಂಡಿದ್ದಾರೆ.
'ಇಮ್ರಾನ್ ಸದ್ಯಕ್ಕೆ ನಟನೆಯನ್ನು ಬಿಟ್ಟಿದ್ದಾನೆ. ನಾನು ಅವನನ್ನು ನೋಡಿರುವಂತೆ, ಅವನೊಬ್ಬ ನಟ ಎನ್ನುವುದಕ್ಕೆ ಒಳ್ಳೆಯ ಬರಹಗಾರ ಮತ್ತು ನಿರ್ದೇಶಕ ಅವನಲ್ಲಿದ್ದಾನೆ. ಅವನು ತನ್ನ ಚಿತ್ರವನ್ನು ಯಾವಾಗ ನಿರ್ದೇಶನ ಮಾಡುತತಾನೋ ಹೇಳುವುದು ಕಷ್ಟ. ಆದರೆ, ನನ್ನ ಪ್ರಕಾರ ಸದ್ಯದಲ್ಲೇ ಅವನು ನಿರ್ದೇಶಕನಾಗಿ ವಾಪಸ್ಸು ಬರುವ ಸಾಧ್ಯತೆ ಇದೆ. ಅವನಿಗೆ ಒಳ್ಳೆಯ ಸಿನಿಮಾ ಮಾಡುವ ಶಕ್ತಿ ಇದೆ. ಏಕೆಂದರೆ, ಸಿನಿಮಾ ಬಗ್ಗೆ ಅವನು ಸಾಕಷ್ಟು ತಿಳಿದುಕೊಂಡಿದ್ದಾನೆ' ಎಂದು ಅಕ್ಷಯ್ ಹೇಳಿಕೊಂಡಿದ್ದಾರೆ.
ಅದಕ್ಕೆ ಸರಿಯಾಗಿ, ಇಮ್ರಾನ್ ಸಹ ಕಳೆದ ಐದು ವರ್ಷಗಳಿಂದ ಯಾವುದೇ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಐದು ವರ್ಷಗಳ ಹಿಂದೆ ಕಂಗನಾ ರಣಾವತ್ ಜತೆಗೆ 'ಕಟ್ಟಿ ಭಟ್ಟಿ' ಎಂಬ ಚಿತ್ರದಲ್ಲಿ ನಟಿಸಿದ್ದು ಬಿಟ್ಟರೆ ಇಮ್ರಾನ್, ಬೇರೆ ಯಾವುದೇ ಚಿತ್ರದಲ್ಲೂ ನಟಿಸಿಲ್ಲ.
ಇದನ್ನೂ ಓದಿ: ರಂಜನಿ ಅವಸ್ಥಾಂತರ! – ಸಂಚಾರಿ ವಿಜಯ್ಗೆ ನಾಯಕಿ
ಹಾಗಾದರೆ, ಅಕ್ಷಯ್ ಹೇಳುತ್ತಿರುವುದು ನಿಜಾನಾ? ಇರಬಹುದು. ಆದರೆ, ಶಂಖದಿಂದಲೇ ತೀರ್ಥ ಬಂದರೆ ನಂಬಬಹುದು.