ಬೆಂಗಳೂರು: ಸೂಪರ್ಸ್ಟಾರ್ ರಜಿನಿಕಾಂತ್ ಅಭಿನಯದ ಜೈಲರ್ ಸಿನಿಮಾ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾದ ಪ್ರತಿಯೊಂದು ಪಾತ್ರವು ಕೂಡ ವೀಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಅದರಲ್ಲೂ ಖಳನಾಯಕ ವಿನಾಯಕನ್ ವಿಭಿನ್ನ ಮ್ಯಾನರಿಸಂ ಮೂಲಕ ಅಬ್ಬರಿಸಿ ಬೊಬ್ಬಿರಿದ್ದಾರೆ. ವಿನಾಯಕನ್ ನಟನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ನಡುವೆ ಅವರ ಹಳೆಯ ಸಂದರ್ಶನದ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಹರಿದಾಡುತ್ತಿದೆ.
ವಿನಾಯಕನ್ ಅವರು ಮಲಯಾಳಂ ಚಿತ್ರರಂಗದ ಖ್ಯಾತ ನಟ. ತಿಮಿರು ಮತ್ತು ಮಾರಿಯನ್ ತಮಿಳು ಸಿನಿಮಾದಲ್ಲಿ ನಟಿಸುವ ಮೂಲಕ ತಮಿಳು ಚಿತ್ರರಂಗಕ್ಕೂ ಪರಿಚಿತರಾದರು. ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. ಇದೀಗ ಜೈಲರ್ ಸಿನಿಮಾದಲ್ಲಿ ನಟಿಸುವ ಎಲ್ಲ ಚಿತ್ರರಂಗದ ಗಮನ ಸೆಳೆದಿದ್ದಾರೆ. ಜೈಲರ್ ಸಿನಿಮಾ ಬಿಡುಗಡೆಯಾಗುವವರೆಗೂ ಕಾವಲಯ್ಯ ಹಾಡಿನಿಂದಾಗಿ ತಮನ್ನಾ ಎಲ್ಲೆಡೆ ಸುದ್ದಿಯಾಗಿದ್ದರು. ಆದರೆ, ಸಿನಿಮಾ ಬಿಡುಗಡೆ ಬಳಿಕ ಇದೀಗ ವಿನಾಯಕನ್ ಅವರ ವಿಲ್ಲನ್ ಪಾತ್ರ ಎಲ್ಲೆಡೆ ಚರ್ಚೆಯಾಗುತ್ತಿದೆ.
ಇದೇ ಸಂದರ್ಭದಲ್ಲಿ ವಿನಾಯಕನ್ ಅವರ ವಿವಾದಾತ್ಮಕ ಮಾತುಗಳು ಮತ್ತೆ ವೈರಲ್ ಆಗುತ್ತಿವೆ. ಕಳೆದ ವರ್ಷ (2022) ನಟಿ ನವ್ಯಾ ನಾಯರ್ ಮತ್ತೆ ಮಲಯಾಳಂ ಚಿತ್ರಕ್ಕೆ ಕಂಬ್ಯಾಕ್ ಮಾಡಿದ ವಿ.ಕೆ. ಪ್ರಕಾಶ್ ನಿರ್ದೇಶನದ “ಒರುಥಿ” ಚಿತ್ರದ ಪ್ರಚಾರದ ವೇಳೆ ವಿನಾಯಕನ್ ವಿವಾದವನ್ನು ಸೃಷ್ಟಿ ಮಾಡಿಕೊಂಡಿದ್ದರು. ನಾನು 10 ಮಹಿಳೆಯರ ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಓಕೆ ಅಂದರೆ ಓಕೆ. ಒಂದು ವೇಳೆ ನಿರಾಕರಿಸಿದರೆ, ನಾನದನ್ನು ಅಲ್ಲಿಗೆ ಬಿಟ್ಟು ಬಿಡುತ್ತೇನೆ. ಬಲವಂತ ಮಾಡುವುದಿಲ್ಲ. ಮಹಿಳೆಗೆ ಲೈಂಗಿಕತೆ ಬಗ್ಗೆ ಕೇಳುವುದು “ಮೀ ಟೂ” ಎಂದಾದರೆ, ನಾನದನ್ನು ಮುಂದುವರಿಸುತ್ತೇನೆ ಎಂದಿದ್ದರು.
ವಿನಾಯಕನ್ ಹೇಳಿದ ಮಾತು ಮಲಯಾಳಂ ಇಂಡಸ್ಟ್ರಿಯ ಅನೇಕ ಸೆಲೆಬ್ರಿಟಿಗಳ ಕೋಪಕ್ಕೆ ಕಾರಣವಾಗಿತ್ತು. ಈ ವಿವಾದಾತ್ಮಕ ಹೇಳಿಕೆಯನ್ನು ನೀಡುವಾಗ ನಟಿ ನವ್ಯಾ ನಾಯರ್ ಕೂಡ ವೇದಿಕೆ ಮೇಲೆಯೇ ಇದ್ದರು. ಈ ವೇಳೆ ಅವರು ವಿನಾಯಕನ್ ಅವರ ಮಾತನ್ನು ಖಂಡಿಸದೇ ಮೌನ ವಹಿಸಿದ್ದಕ್ಕೆ ಟೀಕೆಗೆ ಗುರಿಯಾದರು. ಆ ಕ್ಷಣದಲ್ಲಿ ನಾನೇನು ಮಾಡಲು ಸಾಧ್ಯವಾಗಲಿಲ್ಲ ಎಂದು ಸಮರ್ಥಿಸಿಕೊಂಡರು ಆದರೆ, ನಂತರದಲ್ಲಿ ಹೇಳಿಕೆಯನ್ನು ಖಂಡಿಸಿದರು.
ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಕ್ಷಮೆಯಾಚಿಸಿದ ವಿನಾಯಕನ್, ತಾನು ಯಾವುದೇ ಮಹಿಳೆಯನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ನೋಯಿಸಿಲ್ಲ ಎಂದು ಹೇಳಿದರು. ಇದೀಗ ಈ ವಿವಾದಕ್ಕೆ ಸಂಬಂಧಿಸಿದ ವಿಡಿಯೋ ತುಣುಕು ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. (ಏಜೆನ್ಸೀಸ್)