ಕೊಚ್ಚಿ: ಮೀಟೂ ಆಂದೋಲನದ ಬಗ್ಗೆ ನಟ ವಿನಾಯಕನ್ ನೀಡಿರುವ ವಿವಾದಾತ್ಮಕ ಹೇಳಿಕೆಗೆ ನಟಿ ನವ್ಯಾ ನಾಯರ್ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಬಿಡುಗಡೆಯಾದ ಒರುಥಿ ಸಿನಿಮಾ ಕುರಿತು ನಿರ್ದೇಶಕ ವಿ.ಕೆ. ಪ್ರಕಾಶ್ ಜತೆ ಇನ್ಸ್ಟಾಗ್ರಾಂ ಲೈವ್ನಲ್ಲಿ ನವ್ಯಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ನಟ ವಿನಾಯಕನ್ ಅವರು ಅಂತಹ ಹೇಳಿಕೆ ನೀಡಿದರೂ ನೀವೇಕೆ ತುಂಬಾ ಮೌನವಾಗಿದ್ರಿ ಎಂದು ನೆಟ್ಟಿಗನೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಿದ ನವ್ಯಾ, ನನ್ನ ಅಸಮಾಧಾನವನ್ನು ಹೊರಹಾಕುವ ಪರಿಸ್ಥಿತಿಯಲ್ಲಿ ನಾನು ಇರಲಿಲ್ಲ ಎಂದಿದ್ದಾರೆ.
ನಟಿ ನವ್ಯಾ ನಾಯರ್ ಮತ್ತೆ ಮಲಯಾಳಂ ಚಿತ್ರಕ್ಕೆ ಕಂಬ್ಯಾಕ್ ಮಾಡಿರುವ ವಿ.ಕೆ. ಪ್ರಕಾಶ್ ನಿರ್ದೇಶನದ “ಒರುಥಿ” ಚಿತ್ರದ ಪ್ರಚಾರದ ವೇಳೆ ವಿನಾಯಕನ್ ವಿವಾದವನ್ನು ಸೃಷ್ಟಿ ಮಾಡಿದ್ದಾರೆ. ಮೀಟೂ ಚಳುವಳಿಯನ್ನು ನಾನು ಅರ್ಥಮಾಡಿಕೊಂಡಿಲ್ಲ, ಅದರ ಅರ್ಥ ಮಹಿಳೆಯರನ್ನು ದೈಹಿಕ ಸಂಬಂಧದ ಬಗ್ಗೆ ಕೇಳುವುದೇ ಎಂದು ಹೇಳುವ ಮೂಲಕ ಮಹಿಳೆಯರ ಕೆಂಗಣ್ಣಿಗೆ ವಿನಾಯಕನ್ ಗುರಿಯಾಗಿದ್ದಾರೆ. ನಾನು 10 ಮಹಿಳೆಯರ ಜತೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುತ್ತೀರಾ ಎಂದು ನಾನು ನೇರವಾಗಿಯೇ ಕೇಳುತ್ತೇನೆ. ಓಕೆ ಅಂದರೆ ಓಕೆ. ಒಂದು ವೇಳೆ ನಿರಾಕರಿಸಿದರೆ, ನಾನದನ್ನು ಅಲ್ಲಿಗೆ ಬಿಟ್ಟು ಬಿಡುತ್ತೇನೆ. ಬಲವಂತ ಮಾಡುವುದಿಲ್ಲ. ಮಹಿಳೆಗೆ ಲೈಂಗಿಕತೆ ಕೇಳುವುದು “ಮೀ ಟೂ” ಎಂದಾದರೆ, ನಾನದನ್ನು ಮುಂದುವರಿಸುತ್ತೇನೆ ಎಂದು ಹೇಳುವ ಮೂಲಕ ವಿವಾದದ ಅಲೆ ಎಬ್ಬಿಸಿದ್ದಾರೆ.
ವಿನಾಯಕನ್ ವಿವಾದಾತ್ಮಕ ಹೇಳಿಕೆಯನ್ನು ನೀಡುವಾಗ ನಟಿ ನವ್ಯಾ ನಾಯರ್ ಕೂಡ ಅದೇ ವೇದಿಕೆ ಮೇಲೆಯೇ ಇದ್ದರು. ಈ ವೇಳೆ ಅವರು ವಿನಾಯಕನ್ ಅವರ ಮಾತನ್ನು ಖಂಡಿಸದೇ ಮೌನ ವಹಿಸಿದ್ದಕ್ಕೆ ಟೀಕೆಗೂ ಗುರಿಯಾಗಿದ್ದಾರೆ. ಆ ಕ್ಷಣದಲ್ಲಿ ನಾನೇನು ಮಾಡಲು ಸಾಧ್ಯವಾಗಲಿಲ್ಲ ಎಂದು ಸಮರ್ಥಿಸಿಕೊಂಡರು ಆದರೆ, ನಂತರದಲ್ಲಿ ಹೇಳಿಕೆಯನ್ನು ಖಂಡಿಸಿದರೂ ಕೂಡ ನವ್ಯಾ ನಡೆದುಕೊಂಡ ರೀತಿ ಹಲವರಿಗೆ ಬೇಸರ ತರಿಸಿದೆ.
ಅಂದಹಾಗೆ ವಿನಾಯಕನ್ ತಮಿಳಿನಲ್ಲಿ ‘ತಿಮಿರು’, ‘ಸಿರುತೈ’, ‘ಮರಿಯಾನ್’ ಮುಂತಾದ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳನ್ನು ನಿರ್ವಹಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ಅಲ್ಲದೆ, ತಮ್ಮ ತವರು ಕೇರಳದಲ್ಲಿ ಗಾಯಕ ಮತ್ತು ಸಂಗೀತ ಸಂಯೋಜಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವುದರ ಜೊತೆಗೆ ನಟನೆಗಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಮತ್ತು ಐಶ್ವರ್ಯಾ ರಾಜೇಶ್, ಸಿಮ್ರಾನ್ ಮತ್ತು ರಿತು ವರ್ಮಾ ನಟಿಸಿರುವ ವಿಕ್ರಮ್ ಅವರ ಮುಂಬರುವ ಚಿತ್ರ ‘ಧ್ರುವ ನಚ್ಚತಿರಂ’ ನಲ್ಲಿ ವಿನಾಯಕನ್ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್)
ಗ್ರಾಹಕರಿಗೆ ಮತ್ತೆ ಶಾಕ್: 4ನೇ ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ, ಐದು ದಿನದಲ್ಲಿ 3.10 ರೂ. ಹೆಚ್ಚಳ
ಇಂದು ಐಪಿಎಲ್ 15ನೇ ಆವೃತ್ತಿ ಉದ್ಘಾಟನಾ ಪಂದ್ಯ ; ಶುಭಾರಂಭಕ್ಕೆ ಸಿಎಸ್‌ಕೆ – ಕೆಕೆಆರ್ ಕಾತರ
ಸಣ್ಣ ವಿಚಾರಕ್ಕೆ ಫೋನ್ನಲ್ಲೇ ಕಿತ್ತಾಡಿಕೊಂಡ ಪ್ರೇಮಿಗಳು: ಮರುದಿನವೇ ನಡೆಯಿತು ಘೋರ ದುರಂತ!