More

    ಡ್ರಿಪ್‌ಪೈಪ್‌ ನೀರು ಕುಡಿದ 50 ಕುರಿಗಳು ಸಾವು?

    ಕೋಲಾರ: ತಾಲೂಕಿನ ನಾಗನಾಳ ಗ್ರಾಮದಲ್ಲಿ ಡ್ರಿಪ್‌ಪೈಪ್‌ನಲ್ಲಿದ್ದ ನೀರು ಕುಡಿದು 50ಕ್ಕೂ ಹೆಚ್ಚು ಕುರಿಗಳು ಸೋಮವಾರ ಮೃತಪಟ್ಟಿವೆ ಎನ್ನಲಾಗಿದೆ.

    ನಾಗನಾಳ ಗ್ರಾಮದ ವೆಂಕಟಮ್ಮ ಅವರ 17ಕುರಿ, ಮಂಜುಳಾ ನರಸಿಂಹಯ್ಯ ಅವರ 17, ಆರತಿ ವಸಂತರಾಜು ಅವರ 16 ಕುರಿಗಳು ಮೃತಪಟ್ಟಿವೆ. ಗ್ರಾಮದ ಹೊರಹೊಲಯದಲ್ಲಿ ಸೋಮವಾರ ಕುರಿಗಳನ್ನು ಮೇಯಲು ಬಿಟ್ಟಾಗ ಕುರಿಗಳು ಬಿಸಿಲಿನ ತಾಪಕ್ಕೆ ದಾಹ ತೀರಿಸಿಕೊಳ್ಳಲು, ಪಕ್ಕದ ಕಂಬಳಿ ತೋಟದ ಡ್ರಿಪ್ ಪೈಪ್‌ಗಳಿಂದ ಹರಿಯುತ್ತಿದ್ದ ನೀರನ್ನು ಕುಡಿದು ಅಸ್ವಸ್ಥಗೊಂಡಿದ್ದು, ಒಂದರ ಹಿಂದೆ ಒಂದರಂತೆ ಕುಸಿದು ಬಿದ್ದಿವೆ. ಆತಂಕಗೊಂಡ ಕುರಿಗಾಯಿಗಳು ತಕ್ಷಣವೇ ಪಶುವೈದ್ಯರಿಗೆ ಮಾಹಿತಿ ನೀಡಿದ್ದು, ವೈದ್ಯರು ಸ್ಥಳಕ್ಕೆ ಬರುವಷ್ಟರಲ್ಲಿ 50 ಕುರಿಗಳು ಮೃತಪಟ್ಟಿವೆ. ಇನ್ನೂನ್ನುಳಿದ ಕುರಿಗಳು ಅಸ್ವಸ್ಥಗೊಂಡಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

    ಡ್ರಿಪ್‌ಪೈಪ್‌ಗಳಲ್ಲಿ ತೋಟದ ಯೂರಿಯಾ ನೀರು?: ಮಾಲೀಕ ಮುರಳೀಧರ ಕಂಬಳಿಗಿಡಗಳ ಪೋಷಣೆಗಾಗಿ ನೀರಿಗೆ ಯೂರಿಯಾ ಔಷಧ ಹಾಕಿ ಡ್ರಿಪ್‌ಪೈಪ್‌ಗಳಲ್ಲಿ ಹರಿಬಿಟ್ಟಿದ್ದರು. ಆದರೆ ಈ ಬಗ್ಗೆ ಕುರಿಗಾಹಿಗಳಿಗೆ ಮಾಹಿತಿ ಇರಲಿಲ್ಲ. ಇನ್ನು ಕುರಿಗಳು ತೋಟದತ್ತ ನೀರು ಕುಡಿಯಲು ಬರುತ್ತವೆ ಎಂದು ತೋಟದ ಮಾಲೀಕರಿಗೂ ಗೊತ್ತಿಲ್ಲದ ಕಾರಣ ಇದೊಂದು ಆಕಸ್ಮಿಕ ಘಟನೆ ಎಂದು ಸ್ಥಳೀಯರು ಹೇಳಿದ್ದಾರೆ.
    ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಪಶುವೈದ್ಯರು ತಿಳಿಸಿದ್ದಾರೆ. ಪಶು ಇಲಾಖೆ ಉಪನಿರ್ದೇಶಕ ಗಂಗತುಳಸಿರಾಮಯ್ಯ ಸ್ಥಳ ಪರಿಶೀಲಿಸಿ, ರೈತರಿಗೆ ಇಲಾಖೆಯಿಂದ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

    ಉರಿಗಿಲಿ ಗ್ರಾಪಂ ವ್ಯಾಪ್ತಿಯ ಅಲ್ಲಲ್ಲಿ ಪ್ರಾಣಿ, ಪಕ್ಷಿಗಳಿಗೆ, ಹಸು ಕುರಿಗಳಿಗೆ ನೀರು ಸಂಗ್ರಹಣೆ ಮಾಡಿ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ಇದೊಂದು ಆಕಸ್ಮಿಕ ಘಟನೆ. ಕುರಿಗಾಹಿಗಳಿಗೆ ಸರ್ಕಾರದಿಂದ ಪರಿಹಾರ ಒದಗಿಸಲು ಕ್ರಮವಹಿಸಲಾಗುವುದು ಎಂದು ಪಿಡಿಒ ರಮೇಶ್ ತಿಳಿಸಿದ್ದಾರೆ.

    ಸ್ಥಳಕ್ಕೆ ಲ್ಯಾಬ್ ಟೆಕ್ನಿಷಿಯನ್ ಡಾ.ನಟರಾಜ್, ಪಶು ವೈದ್ಯಾಧಿಕಾರಿ ರಾಜೇಂದ್ರ ಪ್ರಸಾದ್, ಪಶುವೈದ್ಯ ಪರೀಕ್ಷಕರಾದ ಜ್ಯೋತಿ, ಸುಗುಟೂರು ವೈದ್ಯಾಧಿಕಾರಿ ಶ್ರೀನಿವಾಸಗೌಡ, ಗ್ರಾಪಂ ಕಾರ್ಯದರ್ಶಿ ನಾರಾಯಣಸ್ವಾಮಿ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ಅಧಿಕಾರಿ ಡಾ.ಸುದರ್ಶನ, ಗ್ರಾಪಂ ಸದಸ್ಯೆ ಗೀತಾ ಮಂಜುನಾಥ್‌, ನಾಗನಾಳ ಶಂಕರ್, ಶ್ರೀನಿವಾಸ್ ಗ್ರಾಮಸ್ಥರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts