Actress Samantha : ತಾರಾದಂಪತಿಯಾಗಿದ್ದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಪಡೆದು ವರ್ಷಗಳೇ ಕಳೆದಿವೆ. ಆದರೂ ಇಬ್ಬರ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಲೇ ಇದೆ. ಇದರ ನಡುವೆ ನಾಗಚೈತನ್ಯ ನಟಿ ಶೋಭಿತಾ ಧೂಳಿಪಲ ಅವರೊಂದಿಗೆ ಎರಡನೇ ಮದುವೆಗೆ ಸಿದ್ಧವಾಗಿದ್ದಾರೆ. ತಮ್ಮ ಬಗ್ಗೆ ಏನೇ ವದಂತಿಗಳು ಬಂದರೂ ಅದರ ಬಗ್ಗೆ ಗಮನ ಹರಿಸದೆ ಇಬ್ಬರು ತಮ್ಮ ಕೆಲಸದಲ್ಲಿ ಬಿಜಿಯಾಗಿದ್ದಾರೆ.
ಸದ್ಯ ನಾಗಚೈತನ್ಯ ‘ತಾಂಡೇಲ್’ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅಮೆಜಾನ್ ಪ್ರೈಮ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾದ 'ಸಿಟಾಡೆಲ್' ವೆಬ್ ಸರಣಿಯ ಪ್ರಚಾರದಲ್ಲಿ ಸಮಂತಾ ಬಿಜಿಯಾಗಿದ್ದಾರೆ. ನವೆಂಬರ್ 7 ರಿಂದ ವೆಬ್ ಸರಣಿ ಸ್ಟ್ರೀಮಿಂಗ್ ಆಗುತ್ತಿದೆ. ಈ ವೆಬ್ ಸರಣಿಯ ಪ್ರಚಾರದ ಭಾಗವಾಗಿ, ಸಮಂತಾ ಇತ್ತೀಚೆಗೆ ವರುಣ್ ಧವನ್ ಅವರೊಂದಿಗೆ ಮೋಜಿನ ಚಿಟ್ ಚಾಟ್ ನಡೆಸಿದರು. ಈ ವೇಳೆ ಸಮಂತಾ ಅವರು ತಮ್ಮ ಮಾಜಿ ಪತಿ ನಾಗಚೈತನ್ಯ ಅವರ ಬಗ್ಗೆ ಹೆಸರನ್ನು ಉಲ್ಲೇಖಿಸದೆಯೇ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದರು.
ಸಂದರ್ಶನದ ಭಾಗವಾಗಿ ವರುಣ್ ಧವನ್ ಅವರು ಸಮಂತಾ ಜೊತೆ 'ಸ್ಪೈಸಿ ರಾಪಿಡ್ ಫೈರ್' ಆಯೋಜಿಸಿದ್ದರು. ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡದಿದ್ದರೆ ಹಸಿರು ಮೆಣಸಿನಕಾಯಿ ತಿನ್ನುವುದು ರಾಪಿಡ್ ಫೈರ್ನ ನಿಯಮವಾಗಿತ್ತು. ಜೀವನದಲ್ಲಿ ಬೇಡವಾದರೂ ಯಾವುದಕ್ಕೆ ಹೆಚ್ಚು ಹಣ ಖರ್ಚು ಮಾಡಿದ್ದೀರಿ? ಎಂದು ವರುಣ್ ಧವನ್ ಅವರು ಸಮಂತಾರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಸಮಂತಾ, ನಾನು ನನ್ನ ಮಾಜಿಗೆ (ನಾಗಚೈತನ್ಯ) ದುಬಾರಿ ಉಡುಗೊರೆಗಳನ್ನು ಖರೀದಿಸಿದ್ದೆ ಎಂದರು. ಅದರ ಬೆಲೆ ಎಷ್ಟು? ಎಂದು ವರುಣ್ ಪ್ರಶ್ನಿಸಿದಾಗ, ಸ್ವಲ್ಪ ಹೆಚ್ಚೇ ಆದರೆ, ಆ ವಿಷಯ ಬೇಡ ಮತ್ತೊಂದು ವಿಚಾರ ಮಾತಾಡೋಣ ಎನ್ನುವ ಮೂಲಕ ಸಮಂತಾ ಟಾಪಿಕ್ ಬದಲಿಸಿದರು. ಇದೀಗ ಸಮಂತಾ ಅವರ ಕಾಮೆಂಟ್‌ಗಳು ವೈರಲ್ ಆಗಿವೆ. ವರ್ಷಗಳ ಕಾಲ ಪ್ರೀತಿಸುತ್ತಿದ್ದ ಸಮಂತಾ ಮತ್ತು ನಾಗಚೈತನ್ಯ 2017ರಲ್ಲಿ ವಿವಾಹವಾದರು. ಸುಮಾರು ನಾಲ್ಕು ವರ್ಷಗಳ ನಂತರ 2021ರಲ್ಲಿ ವಿಚ್ಛೇದನ ಪಡೆದರು.
ಮತ್ತೊಂದು ಸಂದರ್ಶನದಲ್ಲಿ ವಿಚ್ಛೇದನದ ಸಂದರ್ಭದಲ್ಲಿ ತಮ್ಮ ವಿರುದ್ಧ ಮಾಡಿದ ಟ್ರೋಲ್ಗಳ ಬಗ್ಗೆ ಸಮಂತಾ ಮಾತನಾಡಿದ್ದಾರೆ. ವಿಚ್ಛೇದನದ ನಂತರ ಈ ಸಮಾಜವು ಹುಡುಗಿಯರ ಮೇಲೆ ಕೆಲವು ಟ್ಯಾಗ್‌ಗಳನ್ನು ಹೇರುತ್ತದೆ. ಹುಡುಗಿಯರಿಗೆ ಮಾತ್ರ 'ಸೆಕೆಂಡ್ ಹ್ಯಾಂಡ್, ಯೂಸ್ಡ್' ಟ್ಯಾಗ್‌ಗಳನ್ನು ಏಕೆ ಸೇರಿಸಲಾಗುತ್ತದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಈ ರೀತಿಯ ಮಾತುಗಳು ಸಂಕಟದಲ್ಲಿರುವ ಹೆಣ್ಣುಮಗುವಿಗೆ ಹೆಚ್ಚು ನೋವನ್ನು ಉಂಟುಮಾಡಬಹುದು. ನನ್ನ ವಿಚ್ಛೇದನದ ಬಗ್ಗೆಯೂ ಅನೇಕ ಅಸತ್ಯಗಳನ್ನು ಹರಡಲಾಯಿತು. ಆದರೆ, ನಾನು ಪ್ರತಿಕ್ರಿಯಿಸಲಿಲ್ಲ. ಏಕೆಂದರೆ, ಅವೆಲ್ಲವೂ ಸುಳ್ಳು. ಕಷ್ಟದ ಸಮಯದಲ್ಲಿ ನನ್ನ ಸ್ನೇಹಿತರು ಮತ್ತು ಕುಟುಂಬವು ಸೇರಿದಂತೆ ಅನೇಕ ಜನರು ನನಗೆ ಬೆಂಬಲವಾಗಿ ನಿಂತರು ಎಂದು ಸಮಂತಾ ಭಾವುಕರಾದರು.
ಸಮಂತಾ ಅವರು ಡಿವೋರ್ಸ್ ಬಳಿಕ ಸದ್ಯ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಅವರ ನಿರೀಕ್ಷಿತ ಸ್ಪೈ ಥ್ರಿಲ್ಲರ್ ಸರಣಿ “ಸಿಟಾಡೆಲ್ ಹನಿ ಬನ್ನಿ” ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿದೆ. ಬಾಲಿವುಡ್ ನಟ ವರುಣ್ ಧವನ್ ಜತೆ ನಟಿಸಿದ್ದಾರೆ. ಈ ಸರಣಿಯು ಹಾಲಿವುಡ್ ವೆಬ್ ಸರಣಿ ಸಿಟಾಡೆಲ್‌ನ ರೀಮೇಕ್ ಆಗಿದೆ. ಇದರ ಹೊರತಾಗಿ ಮತ್ತೊಂದೆಡೆ ಅಗ್ರ ಒಟಿಟಿ ಕಂಪನಿ ನೆಟ್‌ಫ್ಲಿಕ್ಸ್‌ನೊಂದಿಗೆ “ರಕ್ತ ಬ್ರಹ್ಮಾಂಡ” ಎಂಬ ಸರಣಿಯಲ್ಲಿ ಸಮಂತಾ ನಟಿಸಲಿದ್ದಾರೆ. ಈ ಸರಣಿಯನ್ನು “ತುಂಬದ್” ಖ್ಯಾತಿಯ ನಿರ್ದೇಶಕ ಅನಿಲ್ ರಾಹಿ ಬರ್ವೆ ನಿರ್ದೇಶಿಸಿದ್ದಾರೆ. ಇದರಲ್ಲೂ ಸಮಂತಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. (ಏಜೆನ್ಸೀಸ್)