ಬೆಂಗಳೂರು: ಕನ್ನಡದಲ್ಲಿ ಮಕ್ಕಳ ಚಿತ್ರಗಳು ಬಿಡುಗಡೆಯಾಗದೆ ಒಂದು ವರ್ಷವೇ ಆಗಿದೆ. ಅದರಲ್ಲೂ ಕರೊನಾ ಹಾವಳಿಯಿಂದ ಹೊಸ ಚಿತ್ರಗಳು ಬಿಡುಗಡೆಯಾಗದೆ, ಈಗಷ್ಟೇ ಕೆಲವು ನಿರ್ಮಾಪಕರು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಆ ಸಾಲಿಗೆ 'ಪಾರು' ಎಂಬ ಮಕ್ಕಳ ಚಿತ್ರವೂ ಸೇರಿದೆ.
ವಿಭಿನ್ನ ಕಥಾಹಂದರ ಹೊಂದಿರುವ 'ಪಾರು' ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿಯು ಚಿತ್ರಕ್ಕೆ 'ಯು/ಎ' ಪ್ರಮಾಣಪತ್ರವನ್ನು ನೀಡಿದೆ. ಜನವರಿಯಲ್ಲಿ ಈ ಮಕ್ಕಳ ಚಿತ್ರ ತೆರೆಗೆ ಬರಲಿದೆ.
ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಬಿಡುಗಡೆ ಮಾಡಿದವರು 'ನಾದ ಬ್ರಹ್ಮ' ಹಂಸಲೇಖ. ನಾಲ್ಕು ಚಿಂದಿ ಆಯುವ ಮಕ್ಕಳ ಪೈಕಿ ಒಬ್ಬಳು ಚೆನ್ನಾಗಿ ಓದಿ ಡಿ.ಸಿ ಆಗುವುದು ಚಿತ್ರದ ಕಥೆಯಾಗಿದ್ದು, ಇಂಥದ್ದೊಂದು ಕಥೆ ಆಯ್ಕೆ ಮಾಡಿಕೊಂಡ ಚಿತ್ರತಂಡಕ್ಕೆ ಶುಭಹಾರೈಸಿ ಕಳುಹಿಸಿದ್ದಾರೆ.
ಮೂಲತಃ ದಾವಣಗೆರೆಯವರಾದ ಹನುಮಂತ್ ಪೂಜಾರ್ ಈ ಚಿತ್ರದ ನಿರ್ದೇಶಕರು. ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಹಾಗೂ ಛಾಯಾಗ್ರಹಣವನ್ನೂ ಅವರೇ ಮಾಡಿದ್ದಾರೆ. ನೀನಾಸಂನ ಕಲಾವಿದರಾಗೂ ಅನುಭವ ಹೊಂದಿರುವ ಅವರು 'ಬುದ್ದಿವಂತ', 'ಅಯೋಗ್ಯ', 'ದೋಬಿಘಾಟ್' ಮುಂತಾದ ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಇದು ಅವರಿಗೆ ಚೊಚ್ಚಲ ನಿರ್ದೇಶನದ ಚಿತ್ರ.
'ಪಾರು' ಚಿತ್ರದಲ್ಲಿ ಮೂರು ಹಾಡುಗಳಿದ್ದು, ಎ.ಟಿ.ರವೀಶ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಬೇಬಿ ಹಿತೈಶಿ ಪೂಜಾರ್, ಮಾಸ್ಟರ್ ಮೈಲಾರಿ ಪೂಜಾರ್, ಮಾಸ್ಟರ್ ಅಚ್ಯುತ್, ಮಾಸ್ಟರ್ ಪ್ರಸಾದ್, ಶಿವಕಾರ್ತಿಕ್, ರಾಂಜಿ, ನಿಜಗುಣ ಶಿವಯೋಗಿ, ಹಾಲೇಶ್, ಪ್ರೇಂಕುಮಾರ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ದಾವಣಗೆರೆ, ಬೆಂಗಳೂರು, ಹಾವೇರಿ ಮುಂತಾದ ಕಡೆ 31 ದಿನಗಳ ಚಿತ್ರೀಕರಣ ನಡೆದಿದೆ.