ಸಿನಿವಾಣಿ

ಸಿನಿರಂಗಕ್ಕೆ ಧುಮುಕುವ ಮುನ್ನ ಅಪ್ಪು ನೆನೆದು ಭಾವುಕರಾದ ಜನಾರ್ದನ ರೆಡ್ಡಿ ಪುತ್ರ ಕಿರೀಟಿ!

ಅಪ್ಪು ಅಂದ್ರೆ ಆತ್ಮೀಯತೆ. ಅಪ್ಪು ಅಂದರೆ ಅಭಿಮಾನಿಗಳಿಗೆ ದೇವರು. ಇನ್ನು, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಕುಟುಂಬಕ್ಕೂ ಮತ್ತು ಅಪ್ಪು ಅವರಿಗೆ ಒಂದೊಳ್ಳೆ ಸಂಬಂಧವಿತ್ತು. ಈಗ ಅಪ್ಪು ಆಶೀರ್ವಾದೊಂದಿಗೆ ಕಿರೀಟಿ ಕನ್ನಡ ಚಿತ್ರರಂಗಕ್ಕೆ ಕಾಲಿಡಲಿದ್ದಾರಂತೆ. ಒಂದಷ್ಟು ತಯಾರಿ ಮಾಡಿಕೊಂಡು ದೊಡ್ಡ ತಾರಾಬಳಗ, ತಾಂತ್ರಿಕ ಬಳಗದೊಂದಿಗೆ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡ್ತಿರುವ ಕಿರೀಟಿ, ಇದೀಗ ಪುನೀತ್ ಜೊತೆಗಿನ ಸುಂದರ ಕ್ಷಣಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮೆಲುಕು ಹಾಕಿದ್ದಾರೆ. ಅಂದಹಾಗೆ, ಮಾರ್ಚ್ 5 ರಂದು ಕಿರೀಟಿ ಅವರ ಮೊದಲ ಸಿನಿಮಾದ ಮುಹೂರ್ತ ಸಮಾರಂಭ ನಡೆಯಲಿದ್ದು, ಕಿರೀಟಿ ಅವರನ್ನು ಪರಿಚಯಿಸುವ ಟೀಸರ್ ಕೂಡಾ ಲಾಂಚ್ ಆಗಲಿದೆಯಂತೆ.
ಹೌದು, ಅಪ್ಪು ಸರಳತೆಯನ್ನು ಕಿರೀಟಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಕೊಂಡಾಡಿದ್ದಾರೆ. ಪುನೀತ್ ಅವರನ್ನು ಬಾಲ್ಯದಲ್ಲೊಮ್ಮೆ ಭೇಟಿಯಾದ ಕ್ಷಣ ಹಾಗೂ ಜಾಕಿ ರಿಲೀಸ್ ಸಂದರ್ಭದಲ್ಲಿ ಭೇಟಿಯಾದ ಎರಡು ಘಟನೆಗಳನ್ನು ನೆನಪಿಸಿಕೊಂಡು ಒಂದು ಭಾವನಾತ್ಮಕ ಪೋಸ್ಟ್ ವೊಂದನ್ನು ಮಾಡಿದ್ದಾರೆ ಕಿರೀಟಿ. ''ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸ 10 ವರ್ಷಗಳದ್ದು . ಆದರೂ ಆ ನೆನಪುಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. 2010ರಲ್ಲಿ ಜಾಕಿ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ನಾನು ಅಪ್ಪು ಸರ್ ಅವರನ್ನು ಮೊದಲ ಸಲ ಭೇಟಿಯಾದೆ. ಅವರ ಡ್ಯಾನ್ಸ್, ಆ್ಯಕ್ಷನ್, ಸ್ಕ್ರೀನ್ ಪ್ರೆಸೆನ್ಸ್ ನೋಡಿ ಅಚ್ಚರಿಗೊಂಡಿದ್ದೆ. ಆದರೆ, ಅವರು ಆಫ್ ಸ್ಕ್ರೀನ್ ನಲ್ಲಿದ್ದ ರೀತಿ ಮನಸಿಗೆ ಹತ್ತಿರವಾಯಿತು. ನಾವು ಥಿಯೇಟರ್‌ನಿಂದ ನನ್ನ ಮನೆಗೆ ಹೋಗುತ್ತಿದ್ದಾಗ, ಮಳೆ ಬೀಳುತ್ತಿತ್ತು ಮತ್ತು ಪುನೀತ್ ಸರ್ ಅವರೆ ನಮ್ಮಿಬ್ಬರಿಗೂ ಕೊಡೆ ಹಿಡಿದರು. ನೃತ್ಯದ ಬಗ್ಗೆ ಮತ್ತು ಅವರ ಆಕ್ಷನ್ ಬಗ್ಗೆ ನನ್ನೊಂದಿಗೆ ಮಾತನಾಡುತ್ತಿದ್ದರು. ಚಿಕ್ಕ ಹುಡುಗನಿಗೆ ಕೊಡೆ ಹಿಡಿದ ಸೂಪರ್‌ಸ್ಟಾರ್. ನಮ್ಮ ಕನಸಿನಲ್ಲಿಯೂ ಊಹಿಸಲಾಗದ ಸಂಗತಿ. ಅದು ಪುನೀತ್ ಸರ್ ಅವರಿಂದ ಮಾತ್ರ ಸಾಧ್ಯ. ಆ ದಿನ ನಾನು ಸರಳತೆಯ ಮೌಲ್ಯವನ್ನು ಅರಿತೆ. ಇದು ಅಪ್ಪು ಸರ್ ಅವರಿಂದ ನಾನು ಅತ್ಯಮೂಲ್ಯವಾದ ಪಾಠ'', ಎಂದು ಭಾವುಕರಾಗಿದ್ದಾರೆ ಕಿರೀಟಿ.
''ಜಗತ್ತಿಗೆ ನನ್ನನ್ನು ಪರಿಚಯಿಸಿಕೊಳ್ಳಲು ಕೇವಲ ಒಂದು ದಿನ ಬಾಕಿ. ಇದೆಲ್ಲಾ ಶುರುವಾಗಿದ್ದು ಪುನೀತ್ ರಾಜ್‌ಕುಮಾರ್ ಸರ್ ಅವರಿಂದ. ಸ್ಫೂರ್ತಿ, ಮಾದರಿ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಜೀವನದ ಮಾರ್ಗದರ್ಶಿ ಅವರು. ನಿಮ್ಮ ಮಾತುಗಳನ್ನು ಎಂದಿಗೂ ಮರೆಯುವುದಿಲ್ಲ ಸರ್. ನನ್ನ ಮೇಲಿನ ನಿಮ್ಮ ನಂಬಿಕೆಯೆ ರಕ್ಷಾಕವಚ. ನಾನು ಅದನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ. ನೀವು ಮತ್ತು ನಮ್ಮ ಜನತೆ ಯಾವಾಗಲೂ ಹೆಮ್ಮೆಪಡುವಂತೆ ಮಾಡಲು ಸದಾ ಶ್ರಮಿಸುತ್ತೇನೆ'', ಎಂದು ಕಿರೀಟಿ ತಮ್ಮ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ.