ಸಿನಿವಾಣಿ

ವಿಜಯ್​ ಸೇತುಪತಿ ವಿರುದ್ಧ ತಮಿಳರ ಆಕ್ರೋಶ ... ಯಾಕೆ?

ಚೆನ್ನೈ: ಕಾಲಿವುಡ್​ನಲ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಚಿತ್ರಗಳು ಮತ್ತು ಅಭಿನಯದಿಂದ ಎಲ್ಲರ ಮನಸ್ಸಿಗೆ ಹತ್ತಿರವಾದವರೆಂದರೆ ಅದು ನಟ ವಿಜಯ್​ ಸೇತುಪತಿ. ಈಗ ಅವರ ವಿರುದ್ಧ ತಮಿಳರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಸೋಷಿಯಲ್​ ಮೀಡಿಯಾದಲ್ಲಿ ವಿಜಯ್​ ಸೇತುಪತಿ ವಿರುದ್ಧ ಶೇಮ್​ ಆನ್​ ವಿಜಯ್​ ಸೇತುಪತಿ ಎಂಬ ಅಭಿಯಾನವೇ ಶುರುವಾಗಿದ್ದು, ಟ್ರೆಂಡ್​ ಆಗುತ್ತಿದೆ.

ಇಷ್ಟಕ್ಕೂ ವಿಜಯ್​ ಸೇತುಪತಿ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗಬಹುದು. ವಿಷಯವೇನೆಂದರೆ, ಇತ್ತೀಚೆಗಷ್ಟೇ ಮುತ್ತಯ್ಯ ಮುರಳೀಧರ್​ ಕುರಿತ ಬಯೋಪಿಕ್​ನಲ್ಲಿ ವಿಜಯ್​ ಸೇತುಪತಿ ನಟಿಸುತ್ತಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಟೆಸ್ಟ್​ ಮ್ಯಾಚುಗಳಲ್ಲಿ ದಾಖಲೆಯ 800 ವಿಕೆಟ್​ಗಳನ್ನು ಪಡೆದಿದ್ದ ಮುತ್ತಯ್ಯ ಅವರ ಈ ಬಯೋಪಿಕ್​ಗೆ '800' ಎಂಬ ಹೆಸರನ್ನು ಇಡಲಾಗಿದೆ ಎಂದು ಹೇಳಲಾಗಿತ್ತು. ಈಗ ಅದೇ ವಿಷಯವಾಗಿ ವಿವಾದ ಹುಟ್ಟುಕೊಂಡಿದೆ.

ಪ್ರಮುಖವಾಗಿ ಮುತ್ತಯ್ಯ ಮುರಳೀಧರ್​ ಅವರು ಶ್ರೀಲಂಕಾದ ತಮಿಳರ ಮೇಲೆ ದೌರ್ಜನ್ಯಗಳಾದಾಗ ಯಾವತ್ತೂ ಪ್ರತಿಭಟಿಸಿರಲಿಲ್ಲವಂತೆ. ಕನಿಷ್ಠ ಪಕ್ಷ ಆ ವಿಷಯದ ಕುರಿತಾದ ಒಮ್ಮೆಯೂ ಮಾತನಾಡಿರಲಿಲ್ಲವಂತೆ. ಹೀಗಿರುವಾಗ ಅಂಥವರ ಬಗ್ಗೆ ಸಿನಿಮಾ ಆಗುತ್ತಿರುವುದು ಮತ್ತು ಮುತ್ತಯ್ಯನ ಪಾತ್ರದಲ್ಲಿ ವಿಜಯ್​ ಸೇತುಪತಿ ಕಾಣಿಸಿಕೊಂಡಿರುವುದು ಹಲವರಿಗೆ ಬೇಸರವಾಗಿದೆ. ಅದೇ ಕಾರಣಕ್ಕೆ, ವಿಜಯ್​ ಸೇತುಪತಿ ಕುರಿತಾಗಿ ಆಕ್ರೋಶ ಹೆಚ್ಚಾಗಿದೆ.

ಮುತ್ತಯ್ಯ ಮುರಳೀಧರನ್ ಅವರ ಜೀವನದಲ್ಲಿ ನಡೆದ ಹಲವು ರೋಚಕ ಘಟನೆಗಳು ಈ ಚಿತ್ರದಲ್ಲಿ ಮೂಡಿಬರಲಿದೆ.

ಸದ್ಯಕ್ಕೆ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಯಾರೆಲ್ಲಾ ಈ ಚಿತ್ರದ ಭಾಗವಾಗಲಿದ್ದಾರೆ ಎಂಬುದು ಸ್ಪಷ್ಟವಾಗಲಿದೆ. ಈ ಮಧ್ಯೆ, ವಿಜಯ್ ಸೇತುಪತಿ ಅವರು ಖುದ್ದು ಮುತ್ತಯ್ಯ ಅವರಿಂದಲೇ ಬೌಲಿಂಗ್ ತರಬೇತಿ ಪಡೆಯುತ್ತಿದ್ದು, ಪಕ್ವವಾದ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ.