ಚೆನ್ನೈ: ಜೀವನದಲ್ಲಿ ಒಮ್ಮೆಯಾದರೂ ತನ್ನಿಷ್ಟದ ಕಲಾವಿದರ ಜೊತೆ ನಟಿಸಬೇಕೆಂದು ಕೆಲ ನಟ-ನಟಿಯರು ಅನೇಕ ಸಂದರ್ಭಗಳಲ್ಲಿ ಹೇಳಿರುವುದನ್ನು ನಾವು ಕೇಳಿರುತ್ತೇವೆ. ನೆಚ್ಚಿನ ನಟ-ನಟಿಯರ ಜತೆ ತೆರೆ ಹಂಚಿಕೊಳ್ಳುವ ಕನುಸು ಕಾಣುವುದರಲ್ಲಿ ತಪ್ಪೇನು ಇಲ್ಲ. ಅದೇ ರೀತಿ ಓರ್ವ ನಟ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ನಯನತಾರಾ ಜತೆ ನಟಿಸಲು ಬಯಸಿದ್ದರು. ತನ್ನೊಂದಿಗೆ ನಟಿಸಲು ಒಪ್ಪುವುದಾದರೆ ಡಬಲ್ ಸಂಭಾವನೆ ನೀಡುವುದಾಗಿಯೂ ಹೇಳಿದ್ದರು. ಆದರೆ, ನಯನತಾರಾ ಮಾತ್ರ 100 ಕೋಟಿ ರೂ. ಕೊಟ್ಟರು ಆ ನಟನೊಂದಿಗೆ ನಟಿಸುವುದಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದರಂತೆ. ಹಾಗಾದರೆ, ಆ ನಟ ಯಾರು? ಆ ಸಿನಿಮಾ ಯಾವುದು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾದಲ್ಲಿ ನಟಿಸಿದ ಬಳಿಕ ನಯನತಾರಾ ಪಂಚಭಾಷಾ ತಾರೆಯಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ, ದಕ್ಷಿಣ ಭಾರತ ಸಿನಿರಂಗದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ಸ್ಟಾರ್ ನಟಿಯಾಗಿದ್ದಾರೆ. ಮೂಲಗಳ ಪ್ರಕಾರ ನಯನತಾರಾ ಸಂಭಾವನೆ 10 ಕೋಟಿಯಿಂದ 15 ಕೋಟಿ ರೂ.ವರೆಗೂ ಇದೆ ಎಂದು ಹೇಳಲಾಗಿದೆ. ಆದರೆ, ಈ ಹೀರೋ, ನಯನತಾರಾಗೆ ಡಬಲ್ ಸಂಭಾವನೆ ಕೊಡಲು ರೆಡಿಯಾಗಿದ್ದರು. ಆದರೂ ಆ ಚಿತ್ರವನ್ನು ನಯನಾ ನಿರಾಕರಿಸಿದರು.
ಆ ನಟ ಯಾರು ಎಂದು ಯೋಚಿಸುತ್ತಿದ್ದೀರಾ? ಬೇರೆ ಯಾರೂ ಅಲ್ಲ ತಮಿಳುನಾಡಿನ ಅತಿದೊಡ್ಡ ಉದ್ಯಮಿ ಹಾಗೂ ನಟ ಸರವಣನ್. ಇವರು ಲೆಜೆಂಡ್ ಸರವಣನ್ ಎಂದೇ ಖ್ಯಾತರಾಗಿದ್ದಾರೆ. 2022ರಲ್ಲಿ ತೆರೆಕಂಡ ದಿ ಲೆಜೆಂಡ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಸದ್ದು ಮಾಡದೆ ಫ್ಲಾಪ್ ಆಯಿತು.
ದಿ ಲೆಜೆಂಡ್ ಸಿನಿಮಾಗೆ ನಯನತಾರಾರನ್ನು ಹೀರೋಯಿನ್ ಆಗಿ ಕರೆತರಬೇಕೆಂದು ಮಾತುಕತೆ ನಡೆದಿತ್ತು. ಭಾರಿ ಮೊತ್ತದ ಸಂಭಾವನೆ ಕೊಡಲು ಸರವಣನ್ ಕೂಡ ರೆಡಿಯಾಗಿದ್ದರು. ಅದೇನೆ ಆಗಲಿ ಈ ಸಿನಿಮಾಗೆ ನಯನತಾರಾ ಅವರೇ ನಾಯಕಿಯಾಗಬೇಕೆಂದು ಬಯಸಿದ್ದರು. ಆದರೆ, 100 ಕೋಟಿ ರೂಪಾಯಿ ಕೊಟ್ಟರು ನಿಮ್ಮ ಜೊತೆ ನಟಿಸುವುದಿಲ್ಲ ಎಂದು ನಯನತಾರಾ ಮುಖಕ್ಕೆ ಹೊಡೆದಂತೆ ಸರವಣನ್ಗೆ ಹೇಳಿದರಂತೆ.
ಆ ಸಮಯದಲ್ಲಿ ಐಷಾರಾಮಿ ರೋಲ್ಸ್ ರಾಯ್ ಕಾರು ನಿತ್ಯವೂ ನಯನತಾರಾ ಮನೆಗೆ ಹೋಗುತ್ತಿತ್ತು. ಆ ಕಾರು ಸರವಣನ್ ಅವರಿಗೆ ಸೇರಿದ್ದಾಗಿತ್ತು. ನಯನತಾರಾ ಮನವೊಲಿಸಲು ಅನೇಕ ಭಾರಿ ಅವರ ಮನೆಗೆ ಸರವಣನ್ ಹೋಗಿದ್ದರು ಎನ್ನಲಾಗಿದೆ. ಎಷ್ಟು ಬಾರಿ ಮನವೊಲಿಸಲು ಪ್ರಯತ್ನಿಸಿದರು ಎಂಬುದು ತಿಳಿದಿಲ್ಲ. ಆದರೆ, ನಯನತಾರಾ ಮಾತ್ರ ಯಾವುದಕ್ಕೂ ಒಪ್ಪಲಿಲ್ಲ ಎಂದು ಹೇಳಲಾಗಿದೆ. ಕೊನೆಗೆ ಬೇರೆ ದಾರಿ ಕಾಣದೆ ದಿ ಲೆಜೆಂಡ್ ಚಿತ್ರಕ್ಕೆ ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾರನ್ನು ನಾಯಕಿಯಾಗಿ ಆಯ್ಕೆ ಮಾಡಲಾಯಿತು. (ಏಜೆನ್ಸೀಸ್)