ಸಿನಿವಾಣಿ

‘ಸಲಗ’ ಆಯ್ತು ಈಗ ಪ್ರೇಮಕಥೆ ನಿರ್ದೇಶನಕ್ಕೆ ಸಜ್ಜಾಗ್ತಿದ್ದಾರೆ ‘ದುನಿಯಾ’ ವಿಜಯ್

ಬೆಂಗಳೂರು: ನಟ ದುನಿಯಾ ವಿಜಯ್​, ಸಲಗ ಸಿನಿಮಾ ನಿರ್ದೇಶನ ಮಾಡಿ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಈಗಾಗಲೇ ಆ ಚಿತ್ರದ ಬಹುತೇಕ ಕೆಲಸಗಳು ಮುಕ್ತಾಯವಾಗಿವೆ. ಇನ್ನೇನು ಚಿತ್ರಮಂದಿರಕ್ಕೆ ಆ ಸಿನಿಮಾ ಕರೆತರುವ ನಿಟ್ಟಿಯಲ್ಲಿದ್ದಾರವರು. ಹೀಗಿರುವಾಗಲೇ ಇದೇ ದುನಿಯಾ ವಿಜಯ್​ ಮತ್ತೊಂದು ಬ್ರೇಕಿಂಗ್​ ಸುದ್ದಿ ಕೊಟ್ಟಿದ್ದಾರೆ. ಅದೇನೆಂದರೆ, ಇನ್ನೊಂದು ಸಿನಿಮಾ ನಿರ್ದೇಶನಕ್ಕೆ ವಿಜಯ್​ ಪ್ಲಾನ್​ ಮಾಡಿದ್ದಾರೆ.

ಹೌದು, ಈಗಾಗಲೇ ಫ್ರೆಶ್​ ಕಥೆಯೊಂದನ್ನು ಸಿದ್ಧಪಡಿಸಿರುವ ಅವರು, ಚಿತ್ರೀಕರಣ ಪೂರ್ವ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾದರೆ ಆ ಚಿತ್ರದಲ್ಲಿಯೂ ವಿಜಯ್ ಅವರೇ ಹೀರೋನಾ? ಇಲ್ಲ.. ಈ ಸಿನಿಮಾದಲ್ಲಿ ಸಂಪೂರ್ಣ ಹೊಸ ತಂಡವನ್ನೇ ವಿಜಯ್​ ಪರಿಚಯಿಸಲಿದ್ದಾರೆ. ಈಗಾಗಲೇ ಹೊಸ ಪ್ರತಿಭೆಗಳ ಹುಟುಕಾಟಕ್ಕೂ ಇಳಿದಿದ್ದಾರೆ.

18 ರಿಂದ 22 ವರ್ಷ ವಯಸ್ಸಿನ ಯುವ ಪ್ರತಿಭೆಗಳಿಗಾಗಿ ಶೋಧ ಕಾರ್ಯದಲ್ಲಿರುವ ವಿಜಯ್​, ಈಗಾಗಲೇ ಒಂದಿಷ್ಟು ಮಂದಿಯನ್ನು ಅಂತಿಮ ಮಾಡಿದ್ದಾರೆ. ಅಷ್ಟೇ ಅಲ್ಲ, ದಸರಾ ಹಬ್ಬದ ದಿನದಂದು ಆ ಹೊಸಬರ ಹೆಸರುಗಳನ್ನು ಬಹಿರಂಗಪಡಿಸಲಿದ್ದಾರೆ.

ದುನಿಯಾ ವಿಜಯ್ ಅಂದ ತಕ್ಷಣ ಅಲ್ಲಿ ಆ್ಯಕ್ಷನ್​ ಸೀನ್​ಗಳೇ ಹೈಲೈಟ್​. ಖಡಕ್​ ಸಾಹಸ ದೃಶ್ಯಗಳಲ್ಲಿಯೇ ವಿಜಯ್​ ಕಾಣಿಸುತ್ತಾರೆ. ಆದರೆ, ಈ ಸಿನಿಮಾ ಮಾತ್ರ ಅದೆಲ್ಲದಕ್ಕಿಂತ ತುಂಬ ವಿಭಿನ್ನವಾಗಿರಲಿದೆಯಂತೆ. ರೊಮ್ಯಾಂಟಿಕ್​ ಲವ್​ಸ್ಟೋರಿಯ ಜತೆಗೆ ಅವರು ಬರಲಿದ್ದಾರೆ. ಈ ಎಲ್ಲ ಮಾಹಿತಿ ಸದ್ಯದ ಅಪ್​ಡೇಟ್​. ನವರಾತ್ರಿ ದಿನದಂದೇ ಕಲಾವಿದರು ಯಾರು, ಶೂಟಿಂಗ್​ ಯಾವಾಗ, ನಿರ್ಮಾಪಕರು ಮತ್ತು ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ಲಭ್ಯವಾಗಲಿದೆ.