ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಅರವಿಂದ್ ಕೌಶಿಕ್ ನಿರ್ದೇಶನದ, ಅರವಿಂದ್ ಕೆ.ಪಿ. ಮತ್ತು ದಿವ್ಯಾ ಉರುಡುಗ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ‘ಅರ್ದಂಬರ್ಧ ಪ್ರೇಮಕಥೆ’. ಇತ್ತೀಚೆಗಷ್ಟೆ ಚಿತ್ರದ ಎರಡನೇ ಸಾಂಗ್ ‘ಆರಂಭ’ ಬಿಡುಗಡೆ ಮಾಡಲಾಯಿತು. ಅಕ್ಟೋಬರ್ ಫೆಸ್ಟ್ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಬೈಕ್ ರೇಸರ್‌ಗಳ ಸಮ್ಮುಖದಲ್ಲಿ ಹಾಡನ್ನು ರಿಲೀಸ್ ಮಾಡಿದ ಚಿತ್ರತಂಡ, ಪುನೀತ್ ರಾಜಕುಮಾರ್ ಎರಡನೇ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಹಾಡನ್ನು ಅವರಿಗೆ ಅರ್ಪಿಸಿದೆ.
ಇದೊಂದು ಸ್ಪೂರ್ತಿದಾಯಕ ಹಾಡಾಗಿದ್ದು, ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿಬಂದಿದೆ. ಮೂಲತಃ ಬೈಕರ್ ಆಗಿದ್ದ ಅರವಿಂದ್, ಬಿಗ್‌ಬಾಸ್ ಸೀಸನ್ 8ರಲ್ಲಿ ಭಾಗವಹಿಸಿದ್ದರು. ಇದೀಗ ‘ಅರ್ದಂಬರ್ಧ ಪ್ರೇಮಕಥೆ’ ಮೂಲಕ ಹೀರೋ ಆಗಿ ಲಾಂಚ್ ಆಗುತ್ತಿದ್ದು, ಚಿತ್ರದಲ್ಲೂ ಅವರು ಬೈಕರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ದಿವ್ಯಾ ಉರುಡುಗ ಜೋಡಿಯಾಗಿದ್ದಾರೆ. ಬಿಗ್‌ಬಾಸ್ ಮನೆಯಿಂದಲೂ ಅರವಿಂದ್ ಮತ್ತು ದಿವ್ಯಾ ನಡುವೆ ಪ್ರೇಮಾಂಕುರವಾಗಿ ಮದುವೆಗೆ ರೆಡಿಯಾಗುತ್ತಿದ್ದಾರೆ ಎಂಬ ಸುದ್ದಿಯೂ ಇದೆ.
ಅರವಿಂದ್, ದಿವ್ಯಾ ಜತೆ ರ‌್ಯಾಪರ್ ಅಲೋಕ್, ಶ್ರೇಯಾ ಬಾಬು, ವೆಂಕಟ್ ಶಾಸಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿತ್ ಶೆಟ್ಟಿ ಪ್ರಮುಖ ತಾರಾಗಣದಲ್ಲಿದ್ದಾರೆ. ಹಿರಿಯ ನಟ ದ್ವಾರಕೀಶ್ ಪುತ್ರ ಅಭಿಲಾಷ್ ವಿಶೇಷ ಪಾತ್ರದ ಮೂಲಕ 25 ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಸೂರ್ಯ ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನವಿರಲಿದೆ.