ಸಿನಿವಾಣಿ

ಶ್ರೀದೇವಿ ಪೋಸ್ಟ್​ ಮಾರ್ಟಮ್​ ರಿಪೋರ್ಟ್​ ಬಿಡುಗಡೆ ಮಾಡಿದರಾ ಕಂಗನಾ?

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆಯ ನಂತರ ಬಾಲಿವುಡ್​ನಲ್ಲಿ ಚಿತ್ರ-ವಿಚಿತ್ರ ಬೆಳವಣಿಗೆಗಳಾಗುತ್ತಿವೆ. ಒಂದು ಕಡೆ ನೆಪೋಟಿಸಂ ಕುರಿತಾಗಿ ಸಾಕಷ್ಟು ಚರ್ಚೆಗಳಾಗುತ್ತಿದ್ದರೆ, ಇನ್ನೊಂದು ಕಡೆ ಬಾಲಿವುಡ್​ನ ಕರಾಳ ಮುಖದ ಬಗ್ಗೆಯೂ ಜನ ಸೋಷಿಯಲ್​ ಮೀಡಿಯಾದಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ.

ಎರಡು ವರ್ಷಗಳ ಹಿಂದೆ ದುಬೈನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ನಟಿ ಶ್ರೀದೇವಿ ಅವರದ್ದು ಎನ್ನಲಾದ ಪೋಸ್ಟ್​ ಮಾರ್ಟಂ ರಿಪೋರ್ಟ್​ ಒಂದು ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ. ಅಷ್ಟೇ ಅಲ್ಲ, ಈ ವರದಿಯನ್ನು ನಟಿ ಕಂಗನಾ ರಣಾವತ್​ ಅವರು ಸೋಷಿಯಲ್​ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಲಿವುಡ್​ನಲ್ಲಿ ಆಗುತ್ತಿರುವ ಕಳ್ಳಾಟಗಳನ್ನು ಎಕ್ಸ್​ಪೋಸ್​ ಮಾಡುವ ದೃಷ್ಟಿಯಿಂದಲೇ ಅವರು ಇಷ್ಟೆಲ್ಲಾ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇಷ್ಟಕ್ಕೂ ಈ ವರದಿಯಲ್ಲಿ ಏನಿದೆ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಈ ರಿಪೋರ್ಟ್​ ಪ್ರಕಾರ, ಶ್ರೀದೇವಿ ಬಲವಂತವಾಗಿ ವಿಸ್ಕಿ ಮತ್ತು ಕೊಕೇನ್​ ಸೇವಿಸಿದ್ದರಂತೆ. ಅಲ್ಲದೆ, ಅವರ ದೇಹದಲ್ಲಿ ಮೂರು ಇಂಜುರಿಗಳು ಕಂಡು ಬಂದಿದ್ದು, ಇದು ಸಹಜ ಸಾವಲ್ಲ ಎಂದು ವೈದ್ಯರು ಈ ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಅಟೋಪ್ಸಿ ರಿಪೋರ್ಟ್​ನಲ್ಲಿ ಯು.ಎ.ಇ ಮಿನಿಸ್ಟ್ರಿ ಆಫ್​ ಹೆಲ್ತ್​ ಆಂಡ್​ ಪ್ರಿವೆನ್ಶನ್​ನ ಲೆಟರ್​ ಹೆಡ್​ ಇದೆ.

ಇಂಥದ್ದೊಂದು ಪೋಸ್ಟ್​ ಮಾರ್ಟಂ ರಿಪೋರ್ಟ್ ಸೋಷಿಯಲ್​ ಮೀಡಿಯಾದಲ್ಲಿ ಹರಡುತ್ತಿದ್ದಂತೆಯೇ ಸಾಕಷ್ಟು ಸಂಚಲನ ಉಂಟಾಗಿದೆ. ಈ ರಿಪೋರ್ಟ್​ ನಿಜವಾ? ಇದನ್ನು ಕಂಗನಾ ರಣಾವತ್​ ಯಾಕೆ ಬಹಿರಂಗಗೊಳಿಸಿದರು? ಇದರಿಂದ ಅವರಿಗೆ ಏನು ಪ್ರಯೋಜನ ಎಂಬೆಲ್ಲಾ ಪ್ರಶ್ನೆಗಳು ಗಿರಕಿ ಹೊಡೆಯುತ್ತಿವೆ.

ಈ ಪ್ರಕರಣದ ಕುರಿತು ಆಳಕ್ಕೆ ಇಳಿದಿರುವ ಇಂಡಿಯಾ ಟುಡೇ ಆಂಟಿ ಫೇಕ್​ ನ್ಯೂಸ್​ ವಾರ್​ ರೂಮ್​, ಈ ರಿಪೋರ್ಟ್​ ನಕಲಿ ಎಂದು ಹೇಳಿದೆ. ಅಷ್ಟೇ ಅಲ್ಲ, ಕಂಗನಾ ಇಂಥದ್ದೊಂದು ದಾಖಲೆಯನ್ನು ಬಿಡುಗಡೆ ಮಾಡಿಲ್ಲ ಮತ್ತು ಅದನ್ನು ಹಂಚಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ. ಬರೀ ಕಂಗನಾ ಅಷ್ಟೇ ಅಲ್ಲ, ದುಬೈ ಸರ್ಕಾರ ಸಹ ಇಂಥದ್ದೊಂದು ದಾಖಲೆ ಬಿಡುಗಡೆ ಮಾಡಿಲ್ಲ, ಯಾರೋ ಸುಳ್ಳು ಸುದ್ದಿ ಹಬ್ಬಿಸುವ ನಿಟ್ಟಿನಲ್ಲಿ ಇದನ್ನೆಲ್ಲಾ ಮಾಡಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ಕಂಗನಾ ರಣಾವತ್​ ಅವರ ಪ್ರಚಾರದ ತಂಡದ ಜತೆಗೂ ಇಂಡಿಯಾ ಟುಡೇ ಮಾತನಾಡಿದ್ದು, ತಂಡದವರು ಸಹ ಇವೆಲ್ಲಾ ಸುಳ್ಳು ಸುದ್ದಿ ಮತ್ತು ಕಂಗನಾ ಇಂತಹ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದೆ.