ಸಿನಿವಾಣಿ

ಸಾರಾ ಮೇಲೆ ಕೂಗಾಡಿದ್ದೇಕೆ ಹಿರಿಯ ನಿರ್ದೇಶಕ ಡೇವಿಡ್​ ಧವನ್​?

ಮುಂಬೈ: ಸಾರಾ ಅಲಿ ಖಾನ್​ ಮತ್ತು ವರುಣ್​ ಧವನ್​ ಅಭಿನಯದ ಹೊಸ ಚಿತ್ರ 'ಕೂಲಿ ನಂಬರ್​ ಒನ್​' ಚಿತ್ರವು ಇದೇ ಕ್ರಿಸ್ಮಸ್​ಗೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ ವರುಣ್​ ಮತ್ತು ಸಾರಾ ಚಿತ್ರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಹಾಡೊಂದರ ಚಿತ್ರೀಕರಣ ಸಂದರ್ಭದಲ್ಲಿ ನಿರ್ದೇಶಕ ಡೇವಿಡ್​ ಧವನ್​ ತಮ್ಮ ಮೇಲೆ ಕೂಗಾಡಿದ್ದರು ಎಂದು ಸಾರಾ ಹೇಳಿಕೊಂಡಿದ್ದರು.

ಹಿರಿಯ ನಿರ್ದೇಶಕ ಡೇವಿಡ್​ ಧವನ್​ ಇದುವರೆಗೂ 45 ಚಿತ್ರಗಳನ್ನು ನಿರ್ದೇಶಿಸಿದವರು. ಅದರಲ್ಲೂ ಕಾಮಿಡಿ ಚಿತ್ರಗಳೆಂದರೆ ಅವರು ಬಹಳ ಜನಪ್ರಿಯರು. ಅಂಥವರು ಸೆಟ್​ನಲ್ಲಿ ಎಲ್ಲರೆದುರು ಕೂಗಾಡಿದರಾ ಎಂದು ಆಶ್ಚರ್ಯವಾಗಬಹುದು. ಆದರೆ, ಈ ವಿಷಯವನ್ನು ಸ್ವತಃ ಸಾರಾ ಹೇಳಿಕೊಂಡಿರುವುದರಿಂದ, ಇದನ್ನು ನಂಬಲೇಬೇಕು.

ವಿಷಯವೇನೆಂದರೆ, ಚಿತ್ರದಲ್ಲಿನ ಒಂದು ಹಾಡಿನ ಚಿತ್ರೀಕರಣ ನಡೆಯುತಿತ್ತಂತೆ. ಸಾಕಷ್ಟು ತಡವಾಗಿದ್ದರಿಂದ ಬೇಗಬೇಗ ಚಿತ್ರೀಕರಣ ನಡೆಸಲಾಗುತಿತ್ತಂತೆ. ಈ ಮಧ್ಯೆ, ಒಂದು ಶಾಟ್​ನ ಚಿತ್ರೀಕರಣಕ್ಕೆ ಎಲ್ಲಾ ಸಿದ್ಧವಾಗಿದ್ದರೂ ಸಾರಾ ಮತ್ತು ವರುಣ್​ ಮಾತ್ರ ಸಿದ್ಧವಾಗಿರಲಿಲ್ಲವಂತೆ. ಇದರಿಂದ ಸಿಟ್ಟಾದ ಡೇವಿಡ್​ ಧವನ್​, ಸೆಟ್​ನಲ್ಲಿ ಕೂಗಾಡಿದ್ದಾರೆ. ಆದರೆ, ವರುಣ್​ ಆಗ ಕಾರಾವಾನ್​ನಲ್ಲಿ ಇದ್ದುದರಿಂದ, ಎಲ್ಲಾ ಸಿಟ್ಟನ್ನು ಡೇವಿಡ್​ ತಮ್ಮ ಮೇಲೆ ಹೊರಹಾಕಿದರು ಎಂದು ಸಾರಾ ಹೇಳಿಕೊಂಡಿದ್ದಾರೆ.

ಇದರಿಂದ ಕೆಲಕಾಲ ಸೆಟ್​ನಲ್ಲಿ ಸಾಕಷ್ಟು ಬಿಗಿಯಾದ ವಾತಾವರಣವಿತ್ತಂತೆ. ಕ್ರಮೇಣ, ಎಲ್ಲವೂ ಸರಿ ಹೋಯಿತು ಎಂದು ಸಾರಾ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

ಈ 'ಕೂಲಿ ನಂಬರ್​ ಒನ್​' ಚಿತ್ರವು 1995ರಲ್ಲಿ ಬಿಡುಗಡೆಯಾದ ಗೋವಿಂದ ಅಭಿನಯದ ಅದೇ ಹೆಸರಿನ ಚಿತ್ರದ ರೀಮೇಕ್​ ಆಗಿದ್ದು, ಮೂಲ ಚಿತ್ರವನ್ನು ಸಹ ಡೇವಿಡ್​ ಧವನ್​ ನಿರ್ದೇಶಿಸಿದ್ದರು.