ಸಿನಿವಾಣಿ

'ಡಾರ್ಲಿಂಗ್​' ಕೃಷ್ಣ ಈಗ 'ಮಿಸ್ಟರ್​ ಬ್ಯಾಚುಲರ್​'

ಬೆಂಗಳೂರು: 'ಲವ್​ ಮಾಕ್ಟೇಲ್​' ಖ್ಯಾತಿಯ ಕೃಷ್ಣ, ಫೆಬ್ರವರಿ 14ರಂದು ತಮ್ಮ ಬಹುಕಾಲದ ಗೆಳತಿ ಮಿಲನಾ ನಾಗರಾಜ್​ ಅವರನ್ನು ಮದುವೆಯಾಗುವುದಕ್ಕೆ ಸಜ್ಜಾಗಿದ್ದಾರೆ. ಈ ಮಧ್ಯೆ, ಅವರು ಬ್ಯಾಚುಲರ್​ ಆಗಿ ಮುಂದುವರೆಯುವುದಕ್ಕೆ ತೀರ್ಮಾನಿಸಿದ್ದಾರೆ.

'ಲವ್​ ಮಾಕ್ಟೇಲ್​' ಚಿತ್ರದ ನಂತರ ಕೃಷ್ಣ ಇದೀಗ ಆ ಚಿತ್ರದ ಮುಂದುವರೆದ ಭಾಗವನ್ನು ನಿರ್ದೇಶಿಸುವುದರ ಜತೆಗೆ, ಅದರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ, 'ವರ್ಜಿನ್​', 'ಶುಗರ್​ ಫ್ಯಾಕ್ಟರಿ' ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ, ಅವರು 'ಮಿಸ್ಟರ್​ ಬ್ಯಾಚುಲರ್​' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.

'ಮಿಸ್ಟರ್​ ಬ್ಯಾಚುಲರ್​' ಚಿತ್ರದ ಪೋಸ್ಟರ್​, ಹೊಸ ವರ್ಷದ ಅಂಗವಾಗಿ ಇಂದು ಬೆಳಿಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ನಾಯ್ಡು ಬಂಡಾರ್​ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಸಹ ಅವರದ್ದೇ. ಶ್ರೀನಿವಾಸ್​ ಮತ್ತು ಸ್ವರ್ಣಲತಾ ಎನ್ನುವವರು ಈ ಚಿತ್ರದ ನಿರ್ಮಾಪಕರು. ಮಣಿಕಾಂತ್​ ಕದ್ರಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಅಂದಹಾಗೆ, ಇಂದು ಚಿತ್ರದ ಟೈಟಲ್​ ಮಾತ್ರ ಬಿಡುಗಡೆಯಾಗಿದೆ. ಇನ್ನು ಚಿತ್ರದ ಫಸ್ಟ್​ ಲುಕ್​ ಸದ್ಯದಲ್ಲೇ ಬಿಡುಗಡೆಯಾಗುತ್ತದಂತೆ. ಈಗ ಒಪ್ಪಿರುವ ಒಂದಿಷ್ಟು ಚಿತ್ರಗಳನ್ನು ಮುಗಿಸಿದ ನಂತರ ಕೃಷ್ಣಮ 'ಮಿಸ್ಟರ್​ ಬ್ಯಾಚುಲರ್​' ಆಗುವ ಸಾಧ್ಯತೆ ಇದೆ.