ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸದ್ಯ ಸಾಕಷ್ಟು ಸುದ್ದಿ ಮಾಡುತ್ತಿರುವ ಸ್ಯಾಂಡಲ್ವುಡ್ ಸಿನಿಮಾ. ಈಗಾಗಲೇ ಪೋಸ್ಟರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಸಿನಿಮಾ, ಇದೀಗ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನೀಡಿದೆ.
ಹೌದು, ಹಂಬಲ್ ಪೊಲಿಟಿಷಿಯನ್ ನೋಗರಾಜ್ ಸಿನಿಮಾ ಖ್ಯಾತಿಯ ದಾನಿಶ್ ಸೇಠ್, 777 ಚಾರ್ಲಿ ಸಿನಿಮಾದ ಭಾಗವಾಗಿದ್ದಾರೆ. ದಾನಿಶ್ ಜನ್ಮ ದಿನದ ಪ್ರಯುಕ್ತ ಅವರ ಫೋಟೋವನ್ನು ಶೇರ್ ಮಾಡಿಕೊಂಡಿರುವ ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ದಾನಿಷ್ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಿದ್ದಾರೆ.
ಇದನ್ನೂ ಓದಿ: ಆಲಿಯಾ ಭಟ್ ನಿಮಗೆ ಇಷ್ಟೊಂದು ಟ್ರೋಲ್ ಆಗೋದು ಬೇಕಿತ್ತಾ?
ಕಿರಣ್ ರಾಜ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾದಲ್ಲಿ ದಾನಿಶ್, ಕರ್ಷನ್ ರಾಯ್ ಹೆಸರಿನ ಪಾತ್ರವನ್ನು ನಿಭಾಯಿಸಿದ್ದಾರೆ. ಈಗಾಗಲೇ ಅವರ ಭಾಗದ ಚಿತ್ರೀಕರಣ ಮುಗಿದಿದ್ದು, ಚಿತ್ರದ ಪ್ರಮುಖ ಘಟ್ಟದಲ್ಲಿ ಅವರ ಪಾತ್ರ ಬಂದು ಹೋಗಲಿದೆಯಂತೆ.
ಪುಷ್ಕರ್ ಫಿಲ್ಮ್ಸ್ ಬ್ಯಾನರ್ನಲ್ಲಿ ಸಿನಿಮಾ ತಯಾರಾಗುತ್ತಿದ್ದು, ರಕ್ಷಿತ್ ಶೆಟ್ಟಿ ಮತ್ತು ಜಿಎಸ್ ಗುಪ್ತಾ ಸಹ ಬಂಡವಾಳ ಹಾಕಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆಯಲ್ಲಿ ಚಿತ್ರತಂಡವಿದೆ. ಇನ್ನುಳಿದಂತೆ ರಾಜ್ ಬಿ ಶೆಟ್ಟಿ, ಸಂಗೀತ ಶೃಂಗೇರಿ ಸಿನಿಮಾದಲ್ಲಿದ್ದಾರೆ. ನೊಬಿನ್ ಪೌಲ್ ಸಂಗೀತ, ಅರವಿಂದ್ ಕಶ್ಯಪ್ ಕ್ಯಾಮರಾ ಕೈ ಚಳಕ ತೋರಿಸುತ್ತಿದ್ದಾರೆ.