ಸಿನಿವಾಣಿ

'ಛೀ ಕಳ್ಳ' ಎನ್ನುತ್ತಿದ್ದಾರೆ ರೀಷ್ಮಾ ನಾಣಯ್ಯ ... ಆಲ್ಬಂ ಹಾಡಿಗೆ ಹೆಜ್ಜೆ

ಬೆಂಗಳೂರು: 'ಜೋಗಿ' ಪ್ರೇಮ್​ ನಿರ್ದೇಶನದ 'ಏಕ್​ ಲವ್​ ಯಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ರೀಷ್ಮಾ ನಾಣಯ್ಯ, ಈಗ ಆಲ್ಬಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನವೀನ್ ಸಜ್ಜು ಹಾಡಿರುವ 'ಛೀ ಕಳ್ಳ' ಎಂಬ ಹಾಡು ಇತ್ತೀಚೆಗೆ ಎ2 ಮ್ಯೂಸಿಕ್​ ಚಾನಲ್​ನಲ್ಲಿ ಬಿಡುಗಡೆಯಾಗಿದೆ.

ಈ ಹಿಂದೆ 'ಮಂದಾಕಿನಿ', 'ಅಲೆಮಾರಿ' ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ಮಿಸಿದ್ದ ಬೆಂ.ಕೋ. ಶ್ರೀನಿವಾಸ್​ ಅವರ ಮಗ ಅಕ್ಷರ್ ಹಾಗೂ ಬೆಡಗಿ ರೀಷ್ಮಾ ನಾಣಯ್ಯ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಪನರ್ವ್ ಆಕರ್ಷ್ ನಿರ್ದೇಶಿಸಿರುವ ಈ ಗೀತೆಯನ್ನು ವಿಸ್ಮಯ ಜಗ ಬರೆದಿದ್ದಾರೆ. ವಿಸ್ಮಯ ಜಗ ಅವರೇ ರಾಗ ಸಂಯೋಜನೆ ಕೂಡ ಮಾಡಿದ್ದಾರೆ. ಇತ್ತೀಚೆಗೆ ಈ ಹಾಡಿನ ಬಿಡುಗಡೆ ಸಮಾರಂಭ ನಡೆಯಿತು. ಬೆಂ.ಕೋ.ಶ್ರೀನಿವಾಸ್​ ಈ ಹಾಡು ಬಿಡುಗಡೆ ಮಾಡಿ ಶುಭ ಹಾರೈಸಿದರು.

ನಂತರ ಮಾತನಾಡಿದ ಅವರು, 'ನಾನು ಏಳು ಚಿತ್ರಗಳನ್ನು ನಿರ್ಮಿಸಿದ್ದೇನೆ. ಆ ಪೈಕಿ ಕೆಲವು ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಸಹ ಬಂದಿದೆ. ಮಾಧ್ಯಮದವರು ನನಗೆ ಪ್ರೋತ್ಸಾಹ ನೀಡಿದಂತೆ ನನ್ನ ಮಗನಿಗೂ ನೀಡಿ' ಎಂದರು.

ಅಕ್ಷರ್​​ಗೆ ಸಿನಿಮಾದಲ್ಲಿ ಹೀರೋ ಆಗಿ ನಟಿಸಬೇಕೆಂಬ ಆಸೆ ಇದೆಯಂತೆ. ಅದರ ಪೂರ್ವಭಾವಿಯಾಗಿ ಈ ಆಲ್ಬಂನಲ್ಲಿ ಅಭಿನಯಿಸಿರುವುದಾಗಿ ಹೇಳಿದರು ಅಕ್ಷರ್. ಇನ್ನು, ರೀಷ್ಮಾ ನಾಣಯ್ಯ, ಇದು ತಮ್ಮ ಮೊದಲ ಆಲ್ಬಂ ಹಾಡು ಎಂದು ಹೇಳಿಕೊಂಡರು.