ಸಿನಿವಾಣಿ

ಸರೋಜ್​ ಖಾನ್​ ನೃತ್ಯಕ್ಕೆ ಸುಮಲತಾ ಹೆಜ್ಜೆ ...

ಶುಕ್ರವಾರ ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾದ ಬಾಲಿವುಡ್​ನ ಖ್ಯಾತ ನೃತ್ಯ ನಿರ್ದೇಶಕ ಸರೋಜ್​ ಖಾನ್​ ಅವರ ಸಾವಿಗೆ ನಟಿ ಮತ್ತು ಸಂಸದೆ ಸುಮಲತಾ ಅಂಬರೀಶ್​ ಅವರು ಕಂಬನಿ ಮಿಡಿದಿದ್ದಾರೆ. ಅವರ ಜತೆಗೆ ಕೆಲಸ ಮಾಡಿದನ್ನು ನೆನಪಿಸಿಕೊಂಡಿದ್ದಾರೆ.

ಸುಮಲತಾ ಅವರು ಯಾವಾಗ ಸರೋಜ್​ ಖಾನ್​ ಜತೆಗೆ ಕೆಲಸ ಮಾಡಿದ್ದರು ಎಂಬ ಪ್ರಶ್ನೆ ಬರುವುದು ಸಹಜವೇ. 1997ರಲ್ಲಿ ಬಾಲಿವುಡ್​ನಲ್ಲಿ 'ಮಹಾಂತಾ' ಎಂಬ ಚಿತ್ರ ಬಿಡುಗಡೆಯಾಗಿತ್ತು. ಸಂಜಯ್​ ದತ್​, ಜಿತೇಂದ್ರ, ಮಾಧುರಿ ದೀಕ್ಷಿತ್​, ಶಕ್ತಿ ಕಪೂರ್​ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು. ಸುಮಲತಾ ಅವರು ಸಹ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿನ ಒಂದು ಹಾಡಿಗೆ ಅವರು ಮತ್ತು ಸಂಜಯ್​ ದತ್​ ಹೆಜ್ಜೆ ಹಾಕಿದರೆ, ಸರೋಜ್​ ಖಾನ್​ ನೃತ್ಯ ನಿರ್ದೇಶನ ಮಾಡಿದ್ದರು.

ಸರೋಜ್​ ಖಾನ್​ ಅವರ ಸಾವಿಗೆ ಸಂತಾಪ ಸೂಚಿಸಿರುವ ಸಮಲತಾ ಅಂಬರೀಶ್​, 'ಸರೋಜ್​ ಖಾನ್​ ಅವರ ಸಾವಿನ ಸುದ್ದಿ ಕೇಳಿ ಬಹಳ ಬೇಸರವಾಯಿತು. ಅವರೊಬ್ಬ ಅದ್ಭುತ ನೃತ್ಯ ನಿರ್ದೇಶಕರಷ್ಟೇ ಅಲ್ಲ, ಸಹೃದಯಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಅವರ ಜತೆಗೆ 'ಮಹಾಂತಾ' ಎಂಬ ಹಿಂದಿ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿತ್ತು' ಎಂದು ಸುಮಲತಾ ಅವರು ಟ್ವೀಟ್​ ಮಾಡಿದ್ದಾರೆ.

ಬರೀ ಸುಮಲತಾ ಅವರಷ್ಟೇ, ಭಾರತೀಯ ಚಿತ್ರರಂಗದ ಹಲವರು ಸರೋಜ್​ ಖಾನ್​ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ. ಅದರಲ್ಲೂ ಬಾಲಿವುಡ್​ ಸೆಲೆಬ್ರಿಟಿಗಳಂತೂ, ಬೆಳಿಗ್ಗೆಯಿಂದ ಸರೋಜ್​ ಅವರ ಸಾವಿಗೆ ಸೋಷಿಯಲ್​ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

ಸರೋಜ್​ ಅವರು ಬಾಲಿವುಡ್​ನಲ್ಲಿ ತಮ್ಮ ಮೊದಲ ಗುರುಗಳಾಗಿದ್ದರು ಎಂದು ಶಾರೂಖ್​ ಖಾನ್​ ಬಣ್ಣಿಸಿದರೆ, ಅವರು ಬಾಲಿವುಡ್​ನಲ್ಲಿ ಹಲವು ಲೆಜೆಂಡ್​ಗಳನ್ನು ಸೃಷ್ಟಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅವರೊಬ್ಬ ಜೀನಿಯಸ್​ ಆಗಿದ್ದರು ಎಂದು ರವೀನಾ ಟಂಡನ್​ ಅಭಿಪ್ರಾಯಪಟ್ಟರೆ, ತಾನೇನಾದರೂ ಬಾಲಿವುಡ್​ ಡ್ಯಾನ್ಸ್​ ಕಲಿತಿದ್ದರೆ ಅದು ಸರೋಜ್​ ಅವರಿಂದಲೇ ಎಂದು ಮಾಧುರಿ ದೀಕ್ಷಿತ್​ ಹೇಳಿದ್ದಾರೆ.